ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಬೇಡಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಾರಿಗೆ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ, ಪ್ರತಿಯೊಬ್ಬರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುವುದು ಸಹಜ. ಆದರೆ, ಪಕ್ಷದಲ್ಲಿ ಮೊದಲಿನಿಂದಲೂ ಹಿರಿಯರಿಗೆ ಆದ್ಯತೆ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ. ಹೊಸಬರಲ್ಲಿ ಸಮರ್ಥರು ಮತ್ತು ಬುದ್ಧಿವಂತರು ಇದ್ದಾರೆ, ಅಂತಿಮವಾಗಿ ಯಾರಿಗೆ ಸ್ಥಾನ ನೀಡಬೇಕು ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನಲೆಗೆ ಬಂದಿರುವ ಬಗ್ಗೆ ಮಾತನಾಡಿದ ಪಟ್ಟಣ್, ಅಹಿಂದ ವರ್ಗವನ್ನು ಮುನ್ನಡೆಸುವ ಮತ್ತು ಸಂಘಟಿಸುವ ಸಮರ್ಥ ಕೆಪಾಸಿಟಿ ಸತೀಶ್ ಜಾರಕಿಹೊಳಿ ಅವರಿಗಿದೆ , ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಅವರಷ್ಟೇ ಅಲ್ಲದೆ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವರು ಸಿಎಂ ಮತ್ತು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡುವುದು ರಾಜಕೀಯದಲ್ಲಿ ಸಾಮಾನ್ಯ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸತೀಶ್ ಜಾರಕಿಹೊಳಿ ನಡೆಸಿದ ಗುಪ್ತ ಸಮಾಲೋಚನೆಯ ವಿವರಗಳು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಿಎಂ ಬದಲಾವಣೆಯ ವದಂತಿಗಳ ಕುರಿತು ಉತ್ತರಿಸಿದ ಅಶೋಕ್ ಪಟ್ಟಣ್, ಸದ್ಯಕ್ಕೆ ಸಿಎಂ ಬದಲಾವಣೆ ಮಾಡುವಂತಹ ಯಾವುದೇ ಪರಿಸ್ಥಿತಿ ರಾಜ್ಯದಲ್ಲಿ ಕಾಣಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಸುಸೂತ್ರವಾಗಿ ನಡೆಯುತ್ತಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ಸಿದ್ದರಾಮಯ್ಯ ಅವರು ಕೇವಲ ಐದು ವರ್ಷವಲ್ಲ, ಹತ್ತು ಅಥವಾ ಇಪ್ಪತ್ತು ವರ್ಷಗಳ ಕಾಲವೂ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು. ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದೇ ಅಂತಿಮ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಈಗಾಗಲೇ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಸ್ಥಾನ ತ್ಯಜಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಹೀಗಿರುವಾಗ ಪದೇ ಪದೇ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತನಾಡುವುದು ಅನಗತ್ಯ ಎಂದು ಪಟ್ಟಣ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಪಕ್ಷದೊಳಗಿನ ಆಂತರಿಕ ಬೇಡಿಕೆಗಳು ಮತ್ತು ಸ್ಥಾನಮಾನಗಳ ಹಂಚಿಕೆಯ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.


