ಬೆಂಗಳೂರು: ಬೆಂಗಳೂರು ನಗರದಲ್ಲಿ ಒಂದೊಂದು ಇಂಚು ಭೂಮಿಗೆ ಬಂಗಾರದ ಬೆಲೆ ಇದೆ. ಒಂದು ಜಾಗ ಅಡಿ ಸಿಕ್ಕಿದ್ರೂ ಜನ ನಮ್ದು ಅಂತ ಬೋರ್ಡ್ ಹಾಕ್ತಿದ್ದಾರೆ. ಇನ್ನೂ ಬಿಡಿಎ ಜಾಗ ಖಾಲಿ ಇದೆ ಅಂದರೆ ಬಿಡ್ತಾರಾ..ಬೆಂಗಳೂರು ವ್ಯಾಪ್ತಿಯಲ್ಲಿ ಭೂಗಳ್ಳರ ಆಟ ಜೋರಾಗಿಯೇ ನಡೆಯುತ್ತಿದ್ದು ಅಂತವರ ವಿರುದ್ಧ ಇವತ್ತು ಬಿಡಿಎ ಬೃಹತ್ ಕಾರ್ಯಾಚರಣೆ ಮಾಡ್ತು. ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಿತ್ತು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್ ಜಯರಾಮ್ ರವರ ನಿರ್ದೇಶನದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಶ್ರೀ ಕೆ. ನಂಜುಂಡೇಗೌಡ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೇರೋಹಳ್ಳಿ ಗ್ರಾಮದಲ್ಲಿ ಸುಮಾರು ರೂ. 35 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿರುತ್ತದೆ.
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಹೇರೋಹಳ್ಳಿ ಗ್ರಾಮದ ಸರ್ವೆ ನಂಬರ್ 64ರಲ್ಲಿನ ಪ್ರಾಧಿಕಾರದ 0-32.45 ಗುಂಟೆ ಜಮೀನಿನಲ್ಲಿ ಸ್ಥಳೀಯರು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಶೆಡ್ ಗಳು / ಕಟ್ಟಡಗಳನ್ನು ತೆರವುಗೊಳಿಸಿ ಸುಮಾರು 35 ಕೋಟಿ ರೂ. ಬೆಲೆಯ ಜಮೀನನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಚಂದ್ರಶೇಖರ್ ಹಾಗೂ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಯು.ಡಿ. ಕೃಷ್ಣಕುಮಾರ್ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಟಿ. ಸಂಜೀವರಾಯಪ್ಪ ಇವರುಗಳನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು.