Wednesday, April 30, 2025
32 C
Bengaluru
LIVE
ಮನೆಜಿಲ್ಲೆಇಕ್ಬಾಲ್ ಅನ್ಸಾರಿ ಸೋಲಿಗೆ ಹತ್ತಾರು ಸಮಸ್ಯೆಗಳು ಕಾರಣ..?

ಇಕ್ಬಾಲ್ ಅನ್ಸಾರಿ ಸೋಲಿಗೆ ಹತ್ತಾರು ಸಮಸ್ಯೆಗಳು ಕಾರಣ..?

ಕೊಪ್ಪಳ : ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಮತ್ತವರ ಹಳೇ ಬೆಂಬಲಿಗರ ನಡುವೆ ಮುಸುಕಿನ ಗುದ್ದಾಟ ಕ್ಲೈಮಾಕ್ಸ್ ಹಂತ ತಲುಪಿದೆ.‌ ಹಳೇ ಬೆಂಬಲಿಗರು ‘ ಇಕ್ಬಾಲ್ ಅನ್ಸಾರಿ ಸೋಲಿಗೆ ಕಾರಣಗಳು’ ಎಂಬ ಪುಸ್ತಕ ಸಿದ್ದಗೊಳಿಸುತ್ತಿದ್ದು, ಕೆಲ ದಿನದಲ್ಲೇ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಹಾಗೂ ಮುಖಂಡ ಹನುಮಂತಪ್ಪ ಅರಸಿನಕೇರಿ ಒಂದು ಕಾಲಕ್ಕೆ ಇಕ್ಬಾಲ್ ಅನ್ಸಾರಿ ‌ಅವರ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡಿದ್ದವರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನ್ಸಾರಿ ‌ಪರಾಜಿತರಾದ ನಂತರ ಅನ್ಸಾರಿ ಮತ್ತು ಈ ಇಬ್ಬರು ಕಾಂಗ್ರೆಸ್ ಮುಖಂಡರ ನಡುವೆ ಬಿರುಕು ಹುಟ್ಟಿಕೊಂಡಿತ್ತು.‌ ಚುನಾವಣೆ ಸೋಲಿಗೆ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅನ್ಸಾರಿ ಅವರ ಸ್ವಯಂಕೃತ ತಪ್ಪುಗಳೇ ಕಾರಣ ಎಂಬುದು ಈ ಉಭಯ ಮುಖಂಡರ ಆರೋಪ.‌

ಇದನ್ನು ತಳ್ಳಿ ಹಾಕಿದ್ದ ಅನ್ಸಾರಿ,‌ ಸೋಲಿಗೆ ‘ನೀವು ಸೇರಿ ಕೆಲ ಸ್ವಪಕ್ಷದ ನಾಯಕರು’ ಕಾರಣ ಎಂದು ವಾದಿಸಿದ್ದರು. ಈ‌ ಬಗ್ಗೆ ಪರಸ್ಪರ ಸಿಎಂ ಸಿದ್ದರಾಮಯ್ಯ ಮತ್ತು ಇತರೇ ನಾಯಕರಿಗೆ ದೂರು ಸಲ್ಲಿಸಿದ್ದರು. ಇದಾದ ನಂತರ ಗಂಗಾವತಿ ಕಾಂಗ್ರೆಸ್ ಇಬ್ಬಾಗವಾಗಿತ್ತು. ಇದೀಗ ಒಂದು ಹೆಜ್ಜೆ ಮುಂದೆ ‌ಇಟ್ಟಿರೋ ಅನ್ಸಾರಿ ಹಳೇ ಬೆಂಬಲಿಗರು ಕಾಂಗ್ರೆಸ್ ‌ಹೈಕಮಾಂಡ್ ಗೆ ಇಕ್ಬಾಲ್ ಅನ್ಸಾರಿ ತಪ್ಪುಗಳ ಬಗ್ಗೆ ಮಾಹಿತಿ ನೀಡಲು ಪುಸ್ತವನ್ನೇ ತಯಾರಿ ಮಾಡುತ್ತಿದ್ದಾರೆ.

ಈ ಪುಸ್ತಕವನ್ನು ಕೆಪಿಸಿಸಿ ಅಧ್ಯಕ್ಷ ‌ಡಿಕೆಶಿ ಅವರಿಗೆ ತಲುಪಿಸಲು ಅನ್ಸಾರಿ ವಿರೋಧಿ ಬಣ ಮುಂದಾಗಿದೆ. ಪುಸ್ತಕದ ‌ಒಂದಷ್ಟು ಅಂಶಗಳನ್ನು ಇತ್ತೀಚೆಗೆ ಡಿಕೆಶಿ ಅವರಿಗೆ ತಲುಪಿಸಿದ್ದಾರೆ ಎಂಬ ಮಾತುಗಳೂ ಕಾಂಗ್ರೆಸ್ ನಲ್ಲಿ ಕೇಳಿ ಬರುತ್ತಿವೆ. ಅನ್ಸಾರಿ ತಪ್ಪುಗಳ ಬಗ್ಗೆ ತಯಾರಿ ಆಗುತ್ತಿರುವ ಪುಸ್ತಕದ ಕೆಲ ಅಂಶಗಳು ಫ್ರೀಡಂ ಟಿವಿಗೆ ಲಭ್ಯವಾಗಿವೆ.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಧನಾತ್ಮಕ ಅಂಶ ಬಿಂಬಿಸುವ ಪತ್ರಿಕಾ ವರದಿಗಳು, ಲೇಖನಗಳನ್ನು ಯತಾವತ್ ಆಗಿ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಪ್ರಮುಖವಾಗಿ ಕ್ಷೇತ್ರದ ಹಿರಿಯ ನಾಯಕರ ಕಡೆಗಣನೆ, ಸೌಜನ್ಯಕ್ಕೂ ಎಚ್.ಆರ್.ಶ್ರೀನಾಥ ಅವರನ್ನು ಪ್ರಚಾರಕ್ಕೆ ಆಹ್ವಾನಿಸದೇ ಇರುವುದು, ರಾತ್ರಿ ವೇಳೆ ಚುನಾವಣೆ ಪ್ರಚಾರ ಮಾಡುವುದು ಸೇರಿ ವಿವಿಧ ವಿಷಯಗಳ ‌ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಆರೋಪಕ್ಕೆ ಪೂರಕವಾದ ಒಂದು ಪತ್ರಿಕಾ ಲೇಖನ ಅಂಟಿಸಿ, ಬರೆಯಲಾಗಿದೆ. ಅನ್ಸಾರಿ ಅವರು ಯಾವತ್ತೂ ರಾತ್ರಿ 8 ಗಂಟೆ ನಂತರವೇ ಗ್ರಾಮೀಣ ಭಾಗಕ್ಕೆ ಪ್ರಚಾರಕ್ಕೆ ಹೋಗುತ್ತಿದ್ದ ಬಗ್ಗೆ ಸ್ವತಃ ಅವರ ಪ್ರವಾಸಪಟ್ಟಿಯನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆ. ಇದರ ಹೊರತಾಗಿ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಆಡಿದ ಮಾತುಗಳ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಹೂ ಬಾಡಿದ್ದವು, ಕೇಕ್ ಹಾಳಾಗಿತ್ತು!

ಕಳೆದ ಚುನಾವಣೆಯಲ್ಲಿ ಇಕ್ಬಾಲ್ ಅನ್ಸಾರಿ ‌ಅವರು ಗ್ರಾಮೀಣ ಭಾಗದಲ್ಲಿ ಓಡಾಡಿ ಪ್ರಚಾರ‌ ಮಾಡಿಲ್ಲ.‌ ಗ್ರಾಮಕ್ಕೆ ಬರುವುದಾಗಿ ತಿಳಿಸಿ, ಕಾರ್ಯಕರ್ತರನ್ನು ನಿರಾಸೆ ಮಾಡಿರುವ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಭಾಗದ ಕೆಲ ಕಾಂಗ್ರೆಸ್ ಕಾರ್ಯಕರ್ತರು, ‘ಅನ್ಸಾರಿ ಬರುವಿಕೆಗಾಗಿ ತಂದಿದ್ದ ಹೂವಿನ ಹಾರ ಬಾಡಿ ಹೋಗಿದ್ದವು. ಕೇಕ್ ಹಾಳಾಗಿತ್ತು’ ಎಂದು ಬೇಸರ ತೋಡಿಕೊಂಡಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments