Wednesday, January 28, 2026
23.8 C
Bengaluru
Google search engine
LIVE
ಮನೆUncategorizedಅಸಲಿ ಅಧಿಕಾರಿಗಳನ್ನೂ ಬೆಚ್ಚಿ ಬೀಳಿಸಿತ್ತು ನಕಲಿ ಅಧಿಕಾರಿಗಳ ರೇಡ್: ಚಿನ್ನದ ಅಂಗಡಿ ದೋಚಿದವರು ಅರೆಸ್ಟ್!

ಅಸಲಿ ಅಧಿಕಾರಿಗಳನ್ನೂ ಬೆಚ್ಚಿ ಬೀಳಿಸಿತ್ತು ನಕಲಿ ಅಧಿಕಾರಿಗಳ ರೇಡ್: ಚಿನ್ನದ ಅಂಗಡಿ ದೋಚಿದವರು ಅರೆಸ್ಟ್!

ಬೆಂಗಳೂರು : ಇತ್ತೀಚಿಗೆ ನಗರದಲ್ಲಿ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ಜನವರಿ 27 ರಂದು ಕೆಆರ್​ಪುರಂನಲ್ಲಿರುವ ಚಿನ್ನದ ಅಂಗಡಿ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ದಾಳಿ ಮಾಡಿದವರು ಅಸಲಿ ಅಧಿಕಾರಿಗಳಲ್ಲ, ಬದಲಿಗೆ ನಕಲಿ ಅಧಿಕಾರಿಗಳು. 45 ನಿಮಿಷದ ಕಾರ್ಯಾಚರಣೆ ಥೇಟ್ ಸಿನಿಮಾ ಕಥೆಯನ್ನೇ ಹೊಲುವ ರೀತಿ ಇದೆ. ಯಾವಾಗ ಇವರು ನಕಲಿ ಅಧಿಕಾರಿಗಳು ಎಂದು ತಿಳಿಯಿತು, ಆಗ 30 ನಿಮಿಷದ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಇದು ಪ್ರಕರಣದ ಮೇಜರ್ ಟ್ವಿಸ್ಟ್ ಆಗಿದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ಅಂತ ಹೇಳಿ ಇದೇ ತಿಂಗಳು 27 ರಂದು ಇನೋವ್​ ಕಾರ್​ನಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಕೆಆರ್​ಪುರಂನಲ್ಲಿರುವ ಮಹಾಲಕ್ಷ್ಮಿ ಜ್ಯುವೆಲರ್ಸ್ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಹಲವು ಬಂಗಾರದ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ‌ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ ಹೀಗಾಗಿ ದಾಳಿ ಮಾಡಿದ್ದೇವೆ ಎಂದು ನಕಲಿ ಅಧಿಕಾರಿಗಳು ಹೇಳಿದ್ದಾರೆ. ಬಳಿಕ 45 ನಿಮಿಷ ಕಾರ್ಯಾಚರಣೆ ನಡೆಸಿದ ನಕಲಿ ಅಧಿಕಾರಿಗಳು, ಅಂಗಡಿಯಲ್ಲಿದ್ದ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡರು.

ಇವೆಲ್ಲವನ್ನೂ ಸೀಜ್ ಮಾಡುವುದಾಗಿ ನಕಲಿ ಅಧಿಕಾರಿಗಳು ಹೇಳಿದ್ದರು. ಬಳಿಕ ಅಂಗಡಿ ಮಾಲಿಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ಹೇಳಿ ಹೋದರು. ಹೀಗೆ ಹೋಗುವಾಗ ನಕಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಊರು ಬಿಡುವ ಮುನ್ನವೇ ನಕಲಿ ಅಧಿಕಾರಿಗಳು ಲಾಕ್ ಆಗಿದ್ದೇಗೆ ?

ನಕಲಿ ಅಧಿಕಾರಿಗಳು ಚಿನ್ನದ ಅಂಗಡಿಯಿಂದ ಹೊರಡುವಾಗ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಕಂಡು ಅನುಮಾನಗೊಂಡ ಚಿನ್ನದ ಅಂಗಡಿ ಕೆಲ ಸಿಬ್ಬಂದಿಗಳು, ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇದನ್ನು ತಿಳಿದ ನಕಲಿ ಅಧಿಕಾರಿಗಳು, ತಪ್ಪಿಸಿಕೊಳ್ಳುವ ಬರದಲ್ಲಿ ಟಿಸಿ ಪಾಳ್ಯದಲ್ಲಿ ಬೈಕ್​​ಗಳಿಗೆ ಗುದ್ದಿದ್ದಾರೆ.


ಇತ್ತ ಅಂಗಡಿ ಮಾಲಿಕರಿಗೂ ಅನುಮಾನ ಬಂದು ಕೆಆರ್​ಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತಿದ್ದಂತೆ, ಪೊಲೀಸರಿಗೆ ಸರಣಿ ಅಪಘಾತದ ಮಾಹಿತಿ ದೊರೆತಿದೆ. ಕೂಡಲೇ ಅಲರ್ಟ್ ಆದ ಪೊಲೀಸರು ಟಿಸಿ ಪಾಳ್ಯದ ಕಡೆಗೆ ಹೋಗಿದ್ದಾರೆ. ಪೊಲೀಸರು ಬರುವುದನ್ನು ಕಂಡ ನಕಲಿ ಅಧಿಕಾರಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಚೇಸ್​​ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತಕ ನಕಲಿ ಅಧಿಕಾರಿಗಳು. ಸಂಪತ್ ಈ ಹಿಂದೆ ಮಂಡ್ಯದಲ್ಲಿ ಸಹ ಕಳ್ಳತನ ಕೃತ್ಯ ಎಸಗಿದ್ದನು. ಈ ಪ್ರಕರಣ ಸಂಬಂಧ ಜೈಲು ವಾಸ ಅನುಭವಿಸಿ ಬಿಡುಗಡೆಯಾಗಿದ್ದನು. ಅದಾದ ಬಳಿಕ ತಮಿಳುನಾಡು ಮೂಲದ ಓರ್ವ ವ್ಯಕ್ತಿಯ ಸಂರ್ಪಕಕ್ಕೆ ಬಂದಿದ್ದಾನೆ. ಆತನ ನಿರ್ದೇಶನದಂತೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.

ಆರೋಪಿಗಳು ಅರೆಸ್ಟ್​ ಆಗುತ್ತಿದ್ದಂತೆ ತಮಿಳುನಾಡು ಮೂಲದ ಮಾಸ್ಟರ್ ಮೈಂಡ್ ನಾಪತ್ತೆಯಾಗಿದ್ದಾನೆ. ಕೆಆರ್​ಪುರಂ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಕಳ್ಳತನವಾಗಿದ್ದ ಸಂಪೂರ್ಣ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments