ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.ಮೈಸೂರು ಜಿಲ್ಲೆಯಲ್ಲಿ ರಾಮ ರಾಜಕಾರಣ ಸಮರ ತಾರಕಕ್ಕೇರಿದ್ದು, 24 ದಿನ ಉರಿಯುವ ಅಗರಬತ್ತಿಗೆ ಮೈಸೂರು ಪೊಲೀಸರು 2 ತಾಸು ಮಾತ್ರ ಅನುಮತಿ ಕೊಟ್ಟಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ ಹೆಜ್ಜೆಗೂ ಅಡ್ಡಿ ಉಂಟಾಗುತ್ತಿದೆ ಎನ್ನಲಾಗುತ್ತಿದೆ.
ರಂಗರಾವ್ ಅಂಡ ಸನ್ಸ್‌ನಿಂದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ‘ಪರಂಪರಾ’ ಹೆಸರಿನಲ್ಲಿ 111 ಅಡಿ ಉದ್ದದ ಅಗರಬತ್ತಿ ಹಚ್ಚಲು ಸಿದ್ಧತೆ ಮಾಡಲಾಗಿದೆ. ಈ 111 ಅಡಿ ಉದ್ದದ ಅಗರಬತ್ತಿ 24 ದಿನ ಉರಿಯುತ್ತದೆ. ಹೀಗಾಗಿ ಆಯೋಜಕರು 24 ದಿನ ಇಡಲು ಅನುಮತಿ ಕೇಳಿದ್ದರು. ಆದರೆ, ಪೊಲೀಸರು ಈ ಅಗರಬತ್ತಿ ಇಡಲು ಕೇವಲ 2 ತಾಸು ಅವಕಾಶ ನೀಡಿದ್ದಾರೆ. ಎರಡು ತಾಸಿನ ಒಳಗೆ ಅಗರಬತ್ತಿಯನ್ನು ಅಲ್ಲಿಂದ ತೆಗೆಯಲು ಸೂಚಿಸಿದ್ದಾರೆ.
ಇದಲ್ಲದೇ ನಗರದ ಅಶೋಕ ರಸ್ತೆಯಲ್ಲಿ ನಡೆಯಬೇಕಿದ್ದ ಲಕ್ಷ ದೀಪೋತ್ಸವಕ್ಕೆ ನೀಡಿದ್ದ ಅನುಮತಿ ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಜ 22 ರಂದು ಲಕ್ಷ ದೀಪೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅನುಮತಿ ರದ್ದುಪಡಿಸಿದ ಪೊಲೀಸ್ ಹಿಂಬರಹ ನೀಡಿದ್ದಾರೆ.ಪೊಲೀಸರ ಅನುಮತಿ ನಿರಾಕರಣೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರಿಂದ ಅನುಮತಿ ಸಹಾ ಪಡೆಯಲಾಗಿತ್ತು. ಇದೀಗ ಹೆಚ್ಚು ವಾಹನ ಸಂಚಾರ ಜನ ಸಂದಣಿ ಕಾರಣ ನೀಡಿ ಅನುಮತಿ ರದ್ದು ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ರಾಮನಾಮ ಸ್ಮರಣೆ ಬಹಳ ಜೋರಾಗಿದೆ.