ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಕರಣದಲ್ಲಿ ಈಗ ಹೊಸ ತಿರುವು ಲಭಿಸಿದೆ. ಈ ಪ್ರಕರಣದ ಹಿಂದೆ ಸ್ವಾಮೀಜಿಯೊಬ್ಬರ ಸಂಚು ಇತ್ತೇ ಎಂಬ ಸಂಶಯಕ್ಕೆ ಪುಷ್ಟಿ ನೀಡುವಂತೆ ಅದರಹಳ್ಳಿಯ ಕುಮಾರ ಮಹಾರಾಜರ ಸ್ವಾಮೀಜಿ ಮತ್ತು ಕಾಂಗ್ರೆಸ್ ನಾಯಕಿಯೊಬ್ಬರ ನಡುವಿನ ಸ್ಫೋಟಕ ಆಡಿಯೋ ಸಂಭಾಷಣೆಯನ್ನು ಗುತ್ತಿಗೆದಾರ ಸೋನು ಲಮಾಣಿ ಬಿಡುಗಡೆ ಮಾಡಿದ್ದಾರೆ.
ಈ ಹಿಂದೆಯೇ ಬಿಜೆಪಿ ಕಾರ್ಯಕರ್ತರೊಬ್ಬರ ಜೊತೆಗಿನ ಆಡಿಯೋ ವೈರಲ್ ಆಗಿದ್ದ ಬೆನ್ನಲ್ಲೇ ಈಗ ಈ ಎರಡನೇ ಆಡಿಯೋ ಭಾರಿ ಸಂಚಲನ ಮೂಡಿಸಿದ್ದು, ಶಾಸಕರನ್ನು ಉದ್ದೇಶಪೂರ್ವಕವಾಗಿ ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸುವ ಪ್ಲಾನ್ ಬಗ್ಗೆ ಚರ್ಚೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಆಡಿಯೋ ಬಿಡುಗಡೆ ಮಾಡಿರುವ ಸೋನು ಲಮಾಣಿ, ಶಾಸಕರ ವಿರುದ್ಧ ನಡೆದ ಈ ಲೋಕಾಯುಕ್ತ ದಾಳಿಯ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಗಂಭೀರವಾಗಿ ಹೇಳಿಕೊಂಡಿದ್ದಾರೆ.


