ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಆರಂಭಿಸಿರುವ ತಮ್ಮ ಹೊಸ ಹೋಟೆಲ್ ‘ಬಾಸ್ಟಿಯನ್ ಅಮ್ಮ ಕೈ’ ಮೂಲಕ ಕರುನಾಡಿನ ಸಂಸ್ಕೃತಿ ಮತ್ತು ಆಹಾರ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಮುಂಬೈನ ಹೃದಯಭಾಗವಾದ ಬಾಂದ್ರಾ ವೆಸ್ಟ್‌ನಲ್ಲಿರುವ ಈ ಹೋಟೆಲ್‌ನಲ್ಲಿ ಈಗ ಎಲ್ಲೆಡೆ ಕನ್ನಡದ ಡಿಂಡಿಮ ಮೊಳಗುತ್ತಿದೆ.
ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ, ತಮ್ಮ ಉದ್ಯಮದಲ್ಲೂ ಮಣ್ಣಿನ ಅಭಿಮಾನ ಮೆರೆದಿದ್ದು, ಹೋಟೆಲ್‌ನ ಮೆನು ಕಾರ್ಡ್‌ನಲ್ಲಿ ಕರ್ನಾಟಕದ ಭೂಪಟವನ್ನು ಮುದ್ರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿಶೇಷವೆಂದರೆ, ಇಲ್ಲಿನ ಮೆನು ಕಾರ್ಡ್‌ನಲ್ಲಿ ಖಾದ್ಯಗಳ ಹೆಸರು ಅಪ್ಪಟ ಕನ್ನಡದಲ್ಲೇ ಇರುವುದು ಕನ್ನಡಿಗರ ಹೆಮ್ಮೆ ಹೆಚ್ಚಿಸಿದೆ.
ಮಿರ್ಚಿ ಬಜ್ಜಿ ಬದಲಿಗೆ ‘ಮೆಣಸಿನಕಾಯಿ ಬಜ್ಜಿ’, ಸಾಬೂದಾನ ವಡಾ ಬದಲಿಗೆ ‘ಸಬ್ಬಕ್ಕಿ ವಡೆ’ ಎಂಬ ಹೆಸರುಗಳನ್ನು ಬಳಸುವ ಮೂಲಕ ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ. ದಾವಣಗೆರೆ ಬೆಣ್ಣೆ ದೋಸೆಯಿಂದ ಹಿಡಿದು ಕೊಡಗಿನ ಪ್ರಸಿದ್ಧ ಪಂದಿ ಕರಿಯವರೆಗೆ, ಕರ್ನಾಟಕದ ವೈವಿಧ್ಯಮಯ ಸ್ವಾದಗಳನ್ನು ಸವಿಯಲು ಮುಂಬೈ ಜನತೆ ಈಗ ಮುಗಿಬೀಳುತ್ತಿದ್ದಾರೆ. ಗಡಿ ದಾಟಿದ ಕರುನಾಡಿನ ಈ ಘಮಲು ಈಗ ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.


