ರಾಜ್ಯ ರಾಜಕಾರಣದ ಧ್ರುವತಾರೆ ಬಿ.ಎಸ್. ಯಡಿಯೂರಪ್ಪ 83ನೇ ಜನ್ಮದಿನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಹಿಂದೆಂದೂ ಕಂಡರಿಯದ ಅದ್ದೂರಿ ಸಂಭ್ರಮಾಚರಣೆಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿಯ ಜನ್ಮದಿನವು ಕೇವಲ ಕೇಕ್ ಕತ್ತರಿಸುವ ಸಂಭ್ರಮಕ್ಕೆ ಸೀಮಿತವಾಗಿಲ್ಲ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪಾಲಿಗೆ ಹೈಕಮಾಂಡ್ ಹಾಗೂ ವಿರೋಧಿ ಬಣಕ್ಕೆ ನೀಡಲಿರುವ ಪ್ರಬಲ ‘ರಾಜಕೀಯ ಸಂದೇಶ’ವಾಗಿದೆ.

ಕಳೆದ ಬಾರಿ ಹೈಕಮಾಂಡ್ ಸೂಚನೆಯಂತೆ ಬರ್ತ್‌ಡೇ ಆಚರಣೆಗೆ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ವಿಜಯೇಂದ್ರ ಅವರು ಅಪ್ಪನ ವರ್ಚಸ್ಸನ್ನೇ ‘ಮಾಸ್ಟರ್ ಅಸ್ತ್ರ’ವಾಗಿ ಬಳಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಸಮ್ಮುಖದಲ್ಲೇ ಪ್ರಬಲ ಲಿಂಗಾಯತ ನಾಯಕರನ್ನು ಒಗ್ಗೂಡಿಸುವ ಮೂಲಕ, “ಬಿಎಸ್‌ವೈ ಅವರ ಜನಬಲ ಮತ್ತು ಜಾತಿ ಬಲ ಈಗ ನನ್ನ ಬೆನ್ನಿಗಿದೆ” ಎಂದು ಸಾರುವುದು ವಿಜಯೇಂದ್ರ ಅವರ ಪ್ಲಾನ್. ಶಿಕಾರಿಪುರದ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಿ, ಮುಂಬರುವ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು ದಾಖಲೆ ಮಟ್ಟಕ್ಕೆ ಕೊಂಡೊಯ್ಯಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಕೇಂದ್ರದ ವರಿಷ್ಠರು, ರಾಜ್ಯದ ಪ್ರಮುಖ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರ ಸಮ್ಮುಖದಲ್ಲಿ ಈ ಶಕ್ತಿ ಪ್ರದರ್ಶನ ನಡೆಯಲಿದ್ದು, ಇದು ಪರೋಕ್ಷವಾಗಿ ವಿಜಯೇಂದ್ರ ಅವರ ನಾಯಕತ್ವದ ರಣಕಹಳೆಯಂತಿದೆ. ಸಾವಿರಾರು ಕಾರ್ಯಕರ್ತರ ಸಮಾಗಮದೊಂದಿಗೆ ನಡೆಯಲಿರುವ ಈ ಮೆಗಾ ಇವೆಂಟ್, ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಅವರ ಸ್ಥಾನಮಾನವನ್ನು ಮತ್ತಷ್ಟು ಭದ್ರಪಡಿಸಲಿದೆಯೇ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


