ಟರ್ಕಿ: ಬಲಿಕೇಸಿರ್ ನಗರದಲ್ಲಿ ಅಮೆರಿಕ ನಿರ್ಮಿತ ಎಫ್-16 (F-16) ಯುದ್ಧವಿಮಾನ ಪತನಗೊಂಡಿದ್ದು, ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ. ಫೆಬ್ರವರಿ 23ರ ನಸುಕಿನ ಜಾವ ಮಿಷನ್ ಹಾರಾಟದ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಲಿಕೇಸಿರ್‌ನ 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ಗೆ ಸೇರಿದ ಈ ವಿಮಾನವು ಬೆಳಿಗ್ಗೆ 12:56 ರ ಸುಮಾರಿಗೆ ಇದ್ದಕ್ಕಿದ್ದಂತೆ ರೇಡಿಯೋ ಮತ್ತು ಟ್ರ್ಯಾಕಿಂಗ್ ಸಂಪರ್ಕವನ್ನು ಕಳೆದುಕೊಂಡಿತ್ತು. ಕೂಡಲೇ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸಿದಾಗ ಬುರ್ಸಾ-ಇಜ್ಮಿರ್ ಹೆದ್ದಾರಿಯ ಬಳಿ ವಿಮಾನ ಪತನವಾಗಿರುವುದು ಪತ್ತೆಯಾಗಿದೆ. ರಸ್ತೆಯುದ್ದಕ್ಕೂ ವಿಮಾನದ ಅವಶೇಷಗಳು ಚದುರಿಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆಗೆ ಸಂಬಂಧಿಸಿದಂತೆ ಟರ್ಕೀಶ್ ಗವರ್ನರ್ ಇಸ್ಮಾಯಿಲ್ ಉಸ್ತಾವೋಗ್ಲು ಅವರು ಅಧಿಕೃತ ಹೇಳಿಕೆ ನೀಡಿದ್ದು, ಪೈಲಟ್ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಟರ್ಕಿಯ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಘಟನೆಯ ತನಿಖೆಗೆ ಆದೇಶಿಸಿದೆ. ತಾಂತ್ರಿಕ ದೋಷವೇ ಅಥವಾ ಇತರ ಕಾರಣಗಳಿಂದ ಅಪಘಾತ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚಲು ತಜ್ಞರ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.


