ರಾಯಚೂರು: ದೇವದುರ್ಗ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯು ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಕಟಾವಿಗೆ ಬಂದಿದ್ದ ಸಜ್ಜೆ ಮತ್ತು ಜೋಳದ ಬೆಳೆಗಳು ಮಳೆ ಹಾಗೂ ಗಾಳಿಗೆ ಸಿಲುಕಿ ನೆಲಕ್ಕಚ್ಚಿವೆ. ಹೆಚ್.ಸಿದ್ದಾಪುರ ಗ್ರಾಮದ ರೈತ ಕೃಷ್ಣಾ ಎಂಬುವವರು ತಮ್ಮ 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಜ್ಜೆ ಬೆಳೆ ಸಂಪೂರ್ಣ ನಾಶವಾಗಿದ್ದು, ಸಾವಿರಾರು ರೂಪಾಯಿ ಬಂಡವಾಳ ಹಾಕಿದ್ದ ರೈತ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಈ ಮಳೆ ಕೇವಲ ಸಜ್ಜೆ ಮತ್ತು ಜೋಳಕ್ಕೆ ಮಾತ್ರವಲ್ಲದೆ, ಕಟಾವು ಮಾಡಿ ಒಣಗಲು ಹಾಕಿದ್ದ ಮೆಣಸಿನಕಾಯಿಗೂ ದೊಡ್ಡ ಹೊಡೆತ ನೀಡಿದೆ. ಮೆಣಸಿನಕಾಯಿ ಮಳೆಗೆ ಒದ್ದೆಯಾಗಿ ಗುಣಮಟ್ಟ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟದ ಆತಂಕದಲ್ಲಿದ್ದಾರೆ. ಜಿಲ್ಲೆಯ ಹಲವೆಡೆ ಭತ್ತದ ಬೆಳೆಗೂ ಹಾನಿಯಾಗಿದ್ದು, ಅನ್ನದಾತರು ದಿಕ್ಕು ತೋಚದಂತಾಗಿದ್ದಾರೆ.
ನೆಲಕ್ಕಚ್ಚಿದ ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಸರ್ಕಾರ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.


