ಧಾರವಾಡ: ನಗರದ ಪ್ರತಿಷ್ಠಿತ ಡಿಮಾನ್ಸ್ ಸಂಸ್ಥೆಯ ಹಾಸ್ಟೆಲ್ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ (24) ಎಂದು ಗುರುತಿಸಲಾಗಿದ್ದು, ಡಿಮಾನ್ಸ್ ಸಂಸ್ಥೆಯಲ್ಲಿ ಮೊದಲ ವರ್ಷದ ಮಾನಸಿಕ ರೋಗ ಶಾಸ್ತ್ರ ವಿಭಾಗದಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಳು.
ಡಾ. ಪ್ರಜ್ಞಾ ಅವರು ಹಾಸ್ಟೆಲ್ನಲ್ಲಿ ಡಾ. ಪ್ರಿಯಾ ಪಾಟೀಲ ಜೊತೆ ರೂಮ್ ಹಂಚಿಕೊಂಡಿದ್ದರು. ಕಳೆದ ವಾರವಷ್ಟೇ ಶಿವಮೊಗ್ಗಕ್ಕೆ ಹೋಗಿ ಬಂದಿದ್ದ ಪ್ರಜ್ಞಾ ಅವರನ್ನು ನೋಡಲು ನಿನ್ನೆ ಅವರ ಪೋಷಕರು ಧಾರವಾಡಕ್ಕೆ ಬಂದಿದ್ದರು. ಪೋಷಕರು ಉಳಿದುಕೊಳ್ಳಲೆಂದು ಪ್ರಜ್ಞಾ ಅವರ ರೂಮ್ ಮೇಟ್ ಪ್ರಿಯಾ ನಿನ್ನೆ ರಾತ್ರಿ ಬೇರೆಡೆ ವಾಸ್ತವ್ಯ ಹೂಡಿದ್ದರು.
ಪೋಷಕರು ತೆರಳಿದ ನಂತರ ರಾತ್ರಿ ಪ್ರಜ್ಞಾ ರೂಮಿನಲ್ಲಿ ಒಬ್ಬರೇ ಇದ್ದರು. ಇಂದು ಬೆಳಿಗ್ಗೆ ಪ್ರಿಯಾ ವಾಪಸ್ ಬಂದು ನೋಡಿದಾಗ, ಪ್ರಜ್ಞಾ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಧಾರವಾಡ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾನಸಿಕ ಆರೋಗ್ಯದ ಬಗ್ಗೆಯೇ ಅಧ್ಯಯನ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಸಹಪಾಠಿಗಳು ಹಾಗೂ ಪೋಷಕರಲ್ಲಿ ತೀವ್ರ ಆಘಾತ ಮೂಡಿಸಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..


