ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಗರೇಟ್ ಹಾಗೂ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾದ ಹಿನ್ನೆಲೆ ಜೈಲು ವಾರ್ಡರ್ ರನ್ನು ಬಂಧಿಸಲಾಗಿದೆ.. ಜೈಲು ಅಧೀಕ್ಷಕ ಪರಮೇಶ್ ಅವರ ದೂರನ್ನ ಆಧರಿಸಿ ವಾರ್ಡರ್ ರಾಹುಲ್ ಪಾಟೇಲ್ರನ್ನು ಪೊಲೀಸರು ಬಂಧಿಸಿದ್ದಾರೆ..
ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನ ಮಹಾದ್ವಾರದಲ್ಲಿ ನಿಯಮಿತ ತಪಾಸಣೆ ನಡೆದಿದ್ದು,
ರಾಹುಲ್ ಪಾಟೀಲ್ ಅವರ ಚೀಲವನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಪರಿಶೀಲಿಸಿದಾಗ ಎರಡು ಗೋಲ್ಡ್ ಫ್ಲೇಕ್ ಕಿಂಗ್ ಸಿಗರೇಟ್ ಪ್ಯಾಕೆಟ್ ಹಾಗೂ ಅನುಮಾನಾಸ್ಪದ ತೇಳುವಾದ ಪೇಪರ್ ತರಹದ ನಿಷೇಧಿತ ವಸ್ತು ಪತ್ತೆಯಾಯಿತು. ತೂಕ ಮಾಡಿಸಿದಾಗ ಇದು ಸುಮಾರು 60 ಗ್ರಾಂ ಆಗಿದ್ದು, ಮಾದಕ ವಸ್ತುವಿನ ಶಂಕೆಯ ಮೇರೆಗೆ ತಕ್ಷಣವೇ ಜೈಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಜೈಲು ಒಳಗೆ ನಿಷೇಧಿತ ವಸ್ತುಗಳನ್ನು ತರುವುದೇ ಕಾನೂನು ಬಾಹಿರ, ಸಿಬ್ಬಂದಿ ಸ್ವತಃ ಇಂತಹ ಕ್ರಮ ಕೈಗೊಂಡಿರುವುದು ಇಲಾಖೆಗೆ ದೊಡ್ಡ ಹೊಡೆತವಾಗಿದೆ. ಈ ಸಂಬಂಧ ಜೈಲು ಅಧೀಕ್ಷಕ ಪರಮೇಶ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದರು. ದೂರು ಆಧರಿಸಿ ಪ್ರಕರಣವನ್ನು ದಾಖಲಿಸಿದ ಪೊಲೀಸರು ರಾಹುಲ್ ಪಾಟೀಲ್ ಅವರನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
2018 ರಲ್ಲಿ ವಾರ್ಡರ್ ಆಗಿ ಕಾರಾಗೃಹ ಇಲಾಖೆಗೆ ಸೇರ್ಪಡೆಯಾಗಿದ್ದ ರಾಹುಲ್ ಈ ಹಿಂದೆ ಬೆಳಗಾವಿ ಕಾರಾಗೃಹದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ವರ್ಷದ ಜೂನ್ 29 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದು, ಇದೀಗ ಆರೋಪಿಯಾಗಿದ್ದಾರೆ..


