ಬೆಂಗಳೂರು: ಹೊರ ರಾಜ್ಯದಿಂದ ಜಾನುವಾರುಗಳನ್ನು ತಂದು ನಮ್ಮ ರಾಜ್ಯದ ಕಾಡಿನಲ್ಲಿ ಮೇಯಿಸುವುದನ್ನು ನಿಷೇಧಿಸಲು ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು ಸಂಭವಿಸಿದಾಗ ತಮಿಳುನಾಡಿನಿಂದ ಸಾವಿರಾರು ಜಾನುವಾರುಗಳನ್ನು ತಂದು ನಮ್ಮ ಅರಣ್ಯ ನಾಶ ಪಡಿಸುತ್ತಿರುವ ಅಂಶ ವರದಿಯಲ್ಲಿ ತಮ್ಮ ಗಮನಕ್ಕೆ ಬಂದ ಬಳಿಕ, ಹೊರ ರಾಜ್ಯದ ಜಾನುವಾರನ್ನು ನಮ್ಮ ಕಾಡಿನಲ್ಲಿ ಮೇಯಿಸುವುದಕ್ಕೆ ನಿಷೇಧ ಹೇರಲಾಗಿದೆ.
ನಮ್ಮ ರಾಜ್ಯದ ಕುರಿಗಾಹಿಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಡೀಮ್ಡ್ ಅರಣ್ಯದ ಬಗ್ಗೆ ಈಗಾಗಲೇ ಮರು ಸಮೀಕ್ಷೆ ನಡೆಯುತ್ತಿದೆ. ಸರ್ವೋನ್ನತ ನ್ಯಾಯಾಲಯ ಮತ್ತೊಂದು ಅವಕಾಶ ನೀಡಿದ್ದು, ಸಮೀಕ್ಷೆಯಲ್ಲಿ ಅರಣ್ಯದಂತೆ ಇಲ್ಲದ ಯಾವ ಪ್ರದೇಶ ಕೈಬಿಡಬಹುದು ಯಾವುದನ್ನು ಸೇರಿಸಬಹುದು ಎಂಬುದನ್ನು ಪರಾಮರ್ಶಿಸಲಾಗುವುದು ಎಂದು ತಿಳಿಸಿದರು.
ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಿಕೊಳ್ಳಲು ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಪರ್ಯಾಯ ಭೂಮಿ ಮತ್ತು ಎನ್.ಪಿ.ವಿ. ಶುಲ್ಕ ಪಾವತಿಸಿ ನಿಯಮಾನುಸಾರ ಅನುಮತಿ ಪಡೆಯಲು ಅವಕಾಶವಿದೆ ಎಂದೂ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.