ತಿರುಪತಿ: ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸಂಚಲನದ ನಿರ್ಧಾರವನ್ನು ಕೈಗೊಂಡಿದೆ. ಹಿಂದೂಗಳಲ್ಲದವರು, ಅನ್ಯ ಧರ್ಮಗಳನ್ನು ಪಾಲನೆ ಮಾಡಿದ ಹಿನ್ನೆಲೆ ತಿರುಪತಿಯ ನಾಲ್ವರು ನೌಕರರನ್ನು ಅಮಾನತು ಮಾಡಲಾಗಿದೆ.
ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಎಲಿಜರ್, BIRD ಆಸ್ಪತ್ರೆಯ ವೈದ್ಯ ಡಾ.ಜಿ.ಅಸುಂತ, BIRD ಆಸ್ಪತ್ರೆಯ ಫಾರ್ಮಾಸಿಸ್ಟ್ ಎಂ.ಪ್ರೇಮಾವತಿ, BIRD ಆಸ್ಪತ್ರೆ ಸ್ಟಾಫ್ ನರ್ಸ್ ಎಸ್.ರೋಸಿ ಅಮಾನತಗೊಂಡ ನೌಕರರು ಎಂದು ಟಿಟಿಡಿ ಅಧಿಕೃತ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಧರ್ಮದ ಪ್ರಮುಖ ತೀರ್ಥಕ್ಷೇತ್ರವೊಂದಾಗಿ ಕಾರ್ಯನಿರ್ವಹಿಸುತ್ತಿರುವ ಟಿಟಿಡಿ ಸಂಸ್ಥೆಯಲ್ಲಿ, ನೌಕರರು ಹಿಂದೂ ಧಾರ್ಮಿಕ ನಿಷ್ಠೆಗಳನ್ನು ಗೌರವದಿಂದ ಅನುಸರಿಸಬೇಕು ಎಂಬ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಲುವು ಮಾಡಿತ್ತು. ಆದ್ರೆ ನೌಕರರು ಇತರ ಧರ್ಮದ ಆಚರಣೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸಂಸ್ಥೆಯ ಅಧೀನದಲ್ಲಿರುವ ವಿಜಿಲೆನ್ಸ್ ವಿಭಾಗ ಈ ವಿಚಾರದ ಬಗ್ಗೆ ತನಿಖೆ ನಡೆಸಿತ್ತು.
ವಿಜಿಲೆನ್ಸ್ ಅಧಿಕಾರಿಗಳ ವರದಿ, ಮತ್ತು ಹೊಂದಿದ ಪುರಾವೆಗಳ ಆಧಾರದ ಮೇಲೆ, ಟಿಟಿಡಿ ಆಡಳಿತವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಾಲ್ವರು ನೌಕರರ ವಿರುದ್ಧ ಇಲಾಖಾ ಕ್ರಮವಾಗಿ ತಾತ್ಕಾಲಿಕ ಅಮಾನತು ವಿಧಿಸಿದೆ. ಸಂಸ್ಥೆಯ ನೀತಿ ಸಂಹಿತೆಯ ಪ್ರಕಾರ, ನೌಕರರು ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ಸಂಸ್ಥೆಯ ಧಾರ್ಮಿಕ ದೃಷ್ಟಿಕೋನಕ್ಕೆ ವಿರುದ್ಧವಾಗಿ ವ್ಯಕ್ತಪಡಿಸಬಾರದು ಎಂಬ ನಿಬಂಧನೆ ಇದೆ.


