ಕಲಬುರಗಿ: ರಾಜ್ಯದಲ್ಲಿ ಮುಂದಿನ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ನಲ್ಲಿ ಪೈಪೋಟಿ ನಡೆಯುತ್ತಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಗಾದಿಗಾಗಿ ಪೈಪೋಟಿ ನಡೆಯುತ್ತಿದೆ. ಸಿಎಂ ನಾನಾಗಬೇಕು.. ನಾನಾಗಬೇಕೆಂದು ಪರಸ್ಪರ ಹೊಡೆದಾಟ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಯಾವಾಗ ಅಲ್ಲಾಡುತ್ತದೇಯೋ, ಅಸ್ಥಿರತೆ ಕಾಡುತ್ತದೆಯೋ ಆವಾಗ ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ರು.
ಸಿದ್ದರಾಮಯ್ಯ ಅಂದ್ರೆ ಸಮಾವೇಶ.. ಸಮಾವೇಶ ಅಂದ್ರೆ ಸಿದ್ದರಾಮಯ್ಯ.. ಅಹಿಂದ ಹೆಸರನ್ನು ಮುಂದೆ ಇಟ್ಟುಕೊಂಡು ರಾಜಕೀಯವಾಗಿ ಹೈಕಮಾಂಡ್ಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ.. ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಗುಡುಗಿದ್ರು.
ಕಾಂಗ್ರೆಸ್ ಸರ್ಕಾರದ ಸಾಧನೆ ನಿಜವಾಗಿ ಆಗಿದ್ದರೆ ಸುರ್ಜೇವಾಲ ಪದೇ ಪದೇ ರಾಜಕ್ಕೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ. ಇದರಲ್ಲೇ ತಿಳಿಯುತ್ತದೆ ರಾಜ್ಯದಲ್ಲಿ ಶಾಸಕರ ಅಸಮಾಧಾನ ಎಷ್ಟು ಇದೆ ಎನ್ನುವುದು. ಮುಂದೆ ಸಿಎಂ ಬದಲಾವಣೆ ಮಾಡಿದ್ರೆ ಯಾರನ್ನು ಮಾಡಬೇಕು ಎಂದು ತಿಳಿದುಕೊಳ್ಳುವ ಸಲುವಾಗಿ ಬರುತ್ತಿದ್ದಾರೆ ಎಂದ್ರು.
ಐದು ವರ್ಷ ನಾನೇ ಸಿಎಂ ಎಂದು ಹೇಳುವ ಸಿದ್ದರಾಮಯ್ಯ ಕಾಂಗ್ರೆಸ್ ಹೈ ಕಾಮಾಂಡ್ಗೆ ಸವಾಲ್ ಹಾಕುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾಕೆ ಸೈಲೆಂಟ್ ಆಗಿದೆ ಅನ್ನೋದನ್ನು ನಾವು ಹೇಳಲು ಆಗುವುದಿಲ್ಲ. ಕಾಂಗ್ರೆಸ್ನಲ್ಲೇ ಕೆಲವುರು ಡಿಕೆಶಿ ಪರವಾಗಿದ್ದರೆ, ಇನ್ನೂ ಕೆಲವರು ಸಿಎಂ ಸಿದ್ದರಾಮಯ್ಯ ಪರವಾಗಿದ್ದಾರೆ ಎಂದು ಹೇಳಿದ್ರು.
ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ವಿಚಾರಕ್ಕೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿದ್ರೆ ಸಿಎಂ ಸಿದ್ದರಾಮಯ್ಯಗೆ ಕೋಪ ಬರುತ್ತದೆ. ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಮುಗಿತಾ ಬಂದಿದೆ..ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಾಗುತ್ತದೆ. ಒಂದು ಕಡೆ ಡಾ. ಪರಮೇಶ್ವರ್ ಅವರಿಗೂ ಅನ್ಯಾಯವಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಕಳೆದ 2 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಬೆದರಿಸುವ ಕೆಲಸವನ್ನು ಮಾಡುತ್ತಿದೆ. ದಕ್ಷಿಣ ಕನ್ನಡದಲ್ಲಿ ನಮ್ಮ ಶಾಸಕರಾದ ಹರೀಶ್ ಪೂಂಜಾ ಅವರ ಮೇಲೆ FIR ಹಾಕಿ ಬಂಧಿಸಲು ಪ್ರಯತ್ನ ಮಾಡಿದ್ರು ಅದು ಸಾಧ್ಯವಾಗಲಿಲ್ಲ. ಬಳಿಕ ಭರತ್ ಶೆಟ್ಟಿ ಮೇಲೆ ಎಫ್ಐಆರ್ ಹಾಕಿದ್ರು. ಬೈರತಿ ಬಸವರಾಜರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಸ್ವತಃ ಬೈರತಿ ಬಸವರಾಜ್ ಅವರೇ ಹೇಳಿದ್ದಾರೆ. ಮೃತ ರೌಡಿಶೀಟರ್ ತಾಯಿ ಅವರೇ ಬೈರತಿ ಬಸವರಾಜ ಅವರ ಹೆಸರು ನಾನು ಹೇಳಿಲ್ಲ ಎಂದಿದ್ದಾರೆ ಎಂದ್ರು.


