ಸಂಪಾದಕೀಯ:
ಭಾರತದಿಂದ ಹುಲಿಗಳು ಮಾಯ..!
ಇಂಥದ್ದೊಂದು ಹೆಡ್ಲೈನ್ ಓದುವ ಸಮಯ ಇನ್ನು ಕೆಲವೇ ವರ್ಷಗಳಲ್ಲಿ ಬಂದರೂ ಬರಬಹುದು. ಮಕ್ಕಳು ಫೋಟೋದಲ್ಲಿ, ವಿಡಿಯೋದಲ್ಲಷ್ಟೇ ಹುಲಿಯನ್ನ ನೋಡಬೇಕಾಗಿ ಬರಬಹುದು. ಯಾಕೆಂದರೆ ಭಾರತದಲ್ಲಿರುವ ಹುಲಿಗಳ ಸಂತತಿ ಕ್ರಮೇಣ ಕ್ಷೀಣವಾಗುತ್ತಲೇ ಇದೆ. ಹುಲಿ ಸಂರಕ್ಷಣೆಗೆ ಸರ್ಕಾರ ಎಷ್ಟೇ ಕಷ್ಟ ಪಟ್ಟರೂ ಅವುಗಳ ಬೇಟೆ ಮಾತ್ರ ನಿಂತಿಲ್ಲ. ಕೇವಲ 3 ವರ್ಷದಲ್ಲಿ ಭಾರತದಲ್ಲಿ ಹುಲಿಗಳ ಬೇಟೆ ನೋಡಿದರೆ ನಿಜಕ್ಕೂ ಹೌಹಾರಬೇಕಾಗುತ್ತದೆ.
3 ವರ್ಷದಲ್ಲಿ 100 ಹುಲಿಗಳ ಹತ್ಯೆ
ಭಾರತದಲ್ಲಿರುವ ಒಟ್ಟಾರೆ ಹುಲಿಗಳ ಸಂಖ್ಯೆ 3682 (2022ರ ಗಣತಿಯಂತೆ). ಆದರೆ ಕೇವಲ 3 ವರ್ಷದಲ್ಲೇ ಬರೋಬ್ಬರಿ 100ಕ್ಕೂ ಹೆಚ್ಚು ಹುಲಿ ಬೇಟೆ ನಡೆದುಹೋಗಿದೆ. ಇದೊಂದು ಮಾಫಿಯಾ ಕೂಡ ಹೌದು. ಹುಲಿಬೇಟೆಗೆಂದೇ ವಿದೇಶದಿಂದ ಭಾರತದ ಹಂತಕರಿಗೆ ಹವಾಲಾ ಹಣ ಬರುತ್ತಿದೆ.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿ 5 ರಾಜ್ಯಗಳಲ್ಲಿ ಹುಲಿಗಳ ಬೇಟೆ ಅವ್ಯಾಹತವಾಗಿದೆ. ಮೂಲಗಳ ಪ್ರಕಾರ 3 ವರ್ಷದಲ್ಲಿ ಬಲಿಯಾದ ಹುಲಿಗಳನ್ನ ಬರೋಬ್ಬರಿ 8ಕೋಟಿಗೆ ಮಾರಲಾಗಿದೆಯಂತೆ. ಒಂದೊಂದು ಹುಲಿಗೂ 8-12 ಲಕ್ಷ ಕೊಟ್ಟು ಮಯನ್ಮಾರ್ ಮೂಲಕ ಹೊರದೇಶಗಳಿಗೆ ಸಾಗಿಸಲಾಗಿದೆ. ಮಯನ್ಮಾರ್ನ ಕಿಂಗ್ಪಿನ್ಗಳು ಡಿಜಿಟಲ್ ಪೇಮೆಂಟ್ ಮೂಲಕವೇ ಬೇಟೆಗಾರರಿಗೆ ಹವಾಲಾ ಹಣ ಸಂದಾಯ ಮಾಡುತ್ತಿದ್ದಾರೆ.
ಭಾರತದಲ್ಲಿ ಒಟ್ಟು 58 ಹುಲಿ ಸಂರಕ್ಷಿತ ಅರಣ್ಯಗಳಿದೆ. ಅದರಲ್ಲಿ 100ಕ್ಕೂ ಹೆಚ್ಚು ಹುಲಿಗಳು ಇರೋದು ಕೇವಲ 8 ಸಂರಕ್ಷಿತ ಅರಣ್ಯಗಳಲ್ಲಿ ಮಾತ್ರ. ರಾಜಸ್ಥಾನದ ರಣಥಂಭೋರ್ ಅರಣ್ಯವೊಂದರಲ್ಲೇ 40ಕ್ಕೂ ಹೆಚ್ಚು ಹುಲಿಗಳ ಬೇಟೆ ಆಗಿದೆ ಅನ್ನೋದನ್ನು ನಾವಿಲ್ಲಿ ಗಮನಿಸಬೇಕು.
ಹುಲಿಗಳ ಸಂರಕ್ಷಣೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಅರಣ್ಯದಲ್ಲಿ ಎಷ್ಟೇ ಕಣ್ಗಾವಲಿದ್ದರೂ ಹುಲಿಗಳ ಹತ್ಯೆ ನಿಲ್ಲಿಸಲು ಆಗಿಲ್ಲ. ಹೀಗೆ ಸಾಗಿದರೆ ಭಾರತದಲ್ಲಿರುವ 3682 ಹುಲಿಗಳು ಶೂನ್ಯಕ್ಕೆ ಇಳಿಯುವುದು ಖಂಡಿತ. ಅರಣ್ಯ ಇಲಾಖೆ ಕೊಂಚವೂ ತಡ ಮಾಡದೆ ಹುಲಿಗಳ ಸಂರಕ್ಷಣೆ ಮಾಡಲೇಬೇಕು. ಬೇಟೆಗಾರರ ಸೆರೆಹಿಡಿದು ಕಠಿಣ ಶಿಕ್ಷೆ ಕೊಡಿಸಲೇಬೇಕು.
– ಜಯಕೀರ್ತಿ ಭಾರದ್ವಾಜ್
ಜಯಕೀರ್ತಿ ಭಾರದ್ವಾಜ್ ಅವರು ಕಳೆದ 13 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಡಿನ ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಫ್ರೀಡಂ ಟಿವಿಯಲ್ಲಿ ಔಟ್ಪುಟ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ ವಿದೇಶಗಳ ಪ್ರಚಲಿತ ವಿದ್ಯಮಾನಗಳು, ವಿಜ್ಞಾನ-ತಂತ್ರಜ್ಞಾನ, ಲೈಫ್ಸ್ಟೈಲ್, ಪ್ರವಾಸ ವಿಚಾರಕ್ಕೆ ಸಂಬಂಧಿಸದಂತೆ ಸುದ್ದಿ/ಲೇಖನಗಳನ್ನು ಬರೆಯುವುದು ಇವರ ಆಸಕ್ತಿಯ ವಿಷಯಗಳು