ರಾಜ್ಯದ ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಪ್ರತಿ ತಾಲೂಕಿಗೂ ಉಸ್ತುವಾರಿ ಅಧಿಕಾರಿಗಳನ್ನ ನೇಮಿಸಿ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಎಎಸ್ ಗ್ರೇಡಿನ ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಕಲ್ಪನ ಅವರು ಅಧಿಸೂಚನೆ ಹೊರಡಿಸಿದ್ದು, ತಾಲೂಕು ಉಸ್ತುವಾರಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿ ಬರುವಂತೆ, ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಉಸ್ತುವಾರಿ ಅಧಿಕಾರಿಗಳ ಕೆಲಸವೇನು?
ಐದು ಗ್ಯಾರಂಟಿ ಯೋಜನೆಗಳ (ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ) ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವುದು.
ಎಲ್ಲಾ ಸಮುದಾಯದ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ, ನ್ಯೂನತೆಗಳನ್ನು ಸರಿಪಡಿಸಲು ಕ್ರಮವಹಿಸುವುದು.
ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಾಲೆ, ಕಾಲೇಜು ಹಾಗೂ ಐಟಿಐಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳುವುದು.
ಸ್ವಂತ ಕಟ್ಟಡ ಇಲ್ಲದಿರುವ ಅಂಗನವಾಡಿಗಳಿಗೆ ನಿವೇಶನವನ್ನು ಒದಗಿಸುವ ಬಗ್ಗೆ ಪರಿಶೀಲನೆ ಹಾಗೂ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸುವುದು ಮಕ್ಕಳ ಅಪೌಷ್ಟಿಕತೆ ಕುರಿತು ನಿಗಾ ಇಡುವುದು.
ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಸೇರಿದಂತೆ ಹತ್ತು ಹಲವು ವಿಷಯಗಳ ಪ್ರಗತಿ ಪರಿಶೀಲನೆ ನಡೆಸುವುದು.
ತಾಲೂಕಿನ ಯುವಕ-ಯುವತಿಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಅವರ ವೃತ್ತಿನೈಪುಣ್ಯತೆ ಹೆಚ್ಚಿಸಿ ಅವರ ಜೀವನೋಪಾಯವನ್ನು ಸಧೃಡಗೊಳಿಸಲು ಕ್ರಮವಹಿಸುವುದು.
ತಾಲ್ಲೂಕಿನಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಕ್ರಮವಹಿಸುವುದು.
ಖಾಸಗಿ ಸಾಮಾಜಿಕ ಜವಾಬ್ದಾರಿ ಯೋಜನೆಯಡಿಯಲ್ಲಿ ವಿವಿಧ ಕಂಪನಿಗಳಿಂದ ಶಾಸನಬದ್ಧವಾದ ಆರ್ಥಿಕ ಸಹಾಯ ಪಡೆದು ತಾಲ್ಲೂಕಿನ, ಶೈಕ್ಷಣಿಕ, ಆರೋಗ್ಯ ಸ್ವಚ್ಛತೆ ಹಾಗೂ ನೈಸರ್ಗಿಕ ಕಾರ್ಯಗಳನ್ನು ನಿರ್ವಹಿಸಲು ಕ್ರಮವಹಿಸುವುದು.
ಕುಡಿಯುವ ನೀರಿನ ವ್ಯವಸ್ಥೆ, ಓವರ್‌ಹೆಡ್ ಟ್ಯಾಂಕ್‌ಗಳ ಸ್ವಚ್ಛತೆ ಪರಿಶೀಲಿಸಿ ವರದಿ ಸಲ್ಲಿಸುವುದು ಹಾಗೂ ಪ್ರಕೃತಿ ವಿಕೋಪಕ್ಕೀಡಾದ ಪ್ರದೇಶಗಳಲ್ಲಿ ತುರ್ತು ಕ್ರಮವಹಿಸುವುದು.
ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದು.
ಇಲಾಖೆಗಳು ಕೈಗೊಂಡಿರುವ ವಿವಿಧ ಯೋಜನೆಗಳಡಿ ಅಭಿವೃದ್ಧಿ ಯೋಜನೆಗಳು ಸ್ಥಳಪರಿಶೀಲನೆ ಮಾಡುವುದರೊಂದಿಗೆ ನಗರ ಸ್ಥಳೀಯ ಸಂಸ್ಥೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳು(ಪಂಚಾಯತ್) ತಯಾರಿಸುವ ಕ್ರಿಯಾಯೋಜನೆಗಳ ಪರಿಶೀಲನೆ ಮಾಡುವುದು
ತಾಲೂಕು ಉಸ್ತುವಾರಿ ಅಧಿಕಾರಿಗಳು ಮೇಲ್ಕಂಡ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ನಿರ್ವಹಿಸಲು ಸೂಚಿಸಿದೆ ಹಾಗೂ ಪ್ರತಿಮಾಹೆ ತಾವು ನಿರ್ವಹಿಸಿದ ಕಾರ್ಯವರದಿಯನ್ನು ಸರ್ಕಾರಕ್ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವುದು.
ತಾಲೂಕು ಉಸ್ತುವಾರಿ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಹಿಸುವ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುವುದು.