ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಅಕ್ಟೋಬರ್ 5ರಂದು ಬಿಡುಗಡೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳಲ್ಲಿ 17ನೇ ಕಂತಿನ ಹಣವನ್ನು ಉತ್ತರಪ್ರದೇಶದಿಂದ ಬಿಡುಗಡೆ ಮಾಡಿದ್ದರು. ಈಗ 18ನೇ ಕಂತಿನ ಹಣವನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲಿದ್ದಾರೆ. ಒಂಬತ್ತು ಕೋಟಿಗೂ ಅಧಿಕ ರೈತರಿಗೆ ನಾಳೆ ಶನಿವಾರ 2,000 ರೂ ಸಿಗಲಿದೆ.
ನವದೆಹಲಿ, ಅಕ್ಟೋಬರ್ 4: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 18ನೇ ಕಂತಿನ ಬಿಡುಗಡೆಗೆ 9 ಕೋಟಿಗೂ ಅಧಿಕ ರೈತರು ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಳೆ ಶನಿವಾರ (ಅ. 5) 18ನೇ ಕಂತಿನ ಹಣ ಬಿಡುಗಡೆ ಮಾಡುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಪ್ರಧಾನಿಗಳು ನಾಳೆ ಭೇಟಿ ನೀಡಲಿದ್ದು ಅಂದೇ ಪಿಎಂ ಕಿಸಾನ್ ಹಣ ಬಿಡುಗಡೆ ಹಾಗು ಇತರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 9.4 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಸಿಗಲಿದೆ. ಕೇಂದ್ರದಿಂದ ನಾಳೆ ಪಿಎಂ ಕಿಸಾನ್ ಫಲಾನುಭವಿಗಳಿಗೆ ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಆಗಲಿದೆ. 2019ರಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ಐದು ವರ್ಷದಲ್ಲಿ 3 ಲಕ್ಷ ಕೋಟಿಗೂ ಅಧಿಕ ಹಣವನ್ನು ಸರ್ಕಾರ ವ್ಯಯಿಸಿದೆ. ನಾಳೆಯ ಬಿಡುಗಡೆ ಸೇರಿಸಿದರೆ ಸರ್ಕಾರದ ವೆಚ್ಚ ಸುಮಾರು 3.45 ಲಕ್ಷ ಕೋಟಿ ರೂ ಆಗಬಹುದು.
2024ರ ಜೂನ್ 18ರಂದು ಪ್ರಧಾನಿಗಳು ವಾರಾಣಸಿಯಲ್ಲಿ ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು. 9.26 ಕೋಟಿ ರೈತರ ಖಾತೆಗಳಿಗೆ 21,000 ಕೋಟಿ ರೂ ಹಣ ಸಂದಾಯವಾಗಿತ್ತು.
ಪಿಎಂ ಕಿಸಾನ್ ಸ್ಕೀಮ್ನಲ್ಲಿ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಹಣವನ್ನು ಸಹಾಯಧನವಾಗಿ ನೀಡುತ್ತದೆ. 2,000 ರೂಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಬೇಸಾಯಕ್ಕೆ ಸಹಾಯವಾಗಲೆಂದು ಸರ್ಕಾರ ಡಿಬಿಟಿ ಸ್ಕೀಮ್ನಲ್ಲಿ ಈ ಸಹಾಯಧನ ಒದಗಿಸುತ್ತಿದೆ. ವಿಶ್ವದ ಯಾವುದೇ ದೇಶದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಆಗುವುದಿಲ್ಲ. ಆ ಮಟ್ಟಿಗೆ ಪಿಎಂ ಕಿಸಾನ್ ಸ್ಕೀಮ್ ದಾಖಲೆ ಮಾಡಿದೆ