ಟಿಕೆಟ್ ಹಂಚಿಕೆಯಲ್ಲಿ ಅಚ್ಚರಿಗಳನ್ನು ನೀಡೋದ್ರಲ್ಲಿ ಬಿಜೆಪಿ ಹೈಕಮಾಂಡ್ ಸದಾ ಮುಂದಿರುತ್ತದೆ. ಈ ಬಾರಿಯೂ ಅಂತಹ ಅಚ್ಚರಿ ಘಟಿಸಬಹುದು ಎಂಬ ಸುದ್ದಿ ಹಬ್ಬಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಸಂಸದ ಅನಂತ ಕುಮಾರ ಹೆಗಡೆ ಬದಲು ಪ್ರಖರ ಹಿಂದುತ್ವವಾದಿ, ನಮೋ ಬ್ರಿಗೇಡ್ ನೇತಾರ ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ.
ಚುನಾವಣೆ ಕಾವು ಏರುವ ಮೊದಲು ಅನಂತಕುಮಾರ್ ಹೆಗಡೆ ಸರ್ಧೆ ಮಾಡಲ್ಲ ಎಂಬ ವದಂತಿ ಹಬ್ಬಿತ್ತು. ಅನಂತಕುಮಾರ್ ಹೆಗಡೆ ಮಾತುಗಳು ಅದನ್ನೇ ಧ್ವನಿಸುತ್ತಿತ್ತು. ಆದರೆ. ಎಲೆಕ್ಷನ್ ಸಮೀಪದಲ್ಲಿ ಅವರು ದಿಢೀರ್ ಸಕ್ರಿಯ ಆಗಿದ್ದಾರೆ. ಮತ್ತೆ ತಮ್ಮ ಎಂದಿನ ಶೈಲಿಯಲ್ಲಿ ಪ್ರಖರ ಹಿಂದುತ್ವವಾದ ಪ್ರತಿಪಾದನೆ ಮಾಡುತ್ತಿದ್ದಾರೆ.
ಇದರ ಜೊತೆ ಜೊತೆಗೆ ತಮ್ಮ ವಿವಾದಾತ್ಮಕ ಮಾತುಗಳ ಮೂಲಕ ಬಿಜೆಪಿ ಪಕ್ಷಕ್ಕೆ ಮೇಲಿಂದ ಮೇಲೆ ಮುಜುಗರ ಉಂಟು ಮಾಡುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಮಾತುಗಳನ್ನು ಬಿಜೆಪಿ ಸಮರ್ಥಿಸುತ್ತಿಲ್ಲ. ಬದಲಾಗಿ ತಮ್ಮದೇ ಪಕ್ಷ ನಾಯಕನ ಮಾತುಗಳಿಂದ ಅಂತರ ಕಾಯ್ದುಕೊಳ್ಳುತ್ತಿದೆ.
ಅನಂತ ಕುಮಾರ್ ಹೆಗಡೆ ಬದಲು ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್ ಕೊಡುವುದು ಉತ್ತಮ. ಚಕ್ರವರ್ತಿ ಸೂಲಿಬೆಲೆ ಸಮರ್ಥ ಅಭ್ಯರ್ಥಿ ಆಗಬಹುದು ಎಂಬ ಚರ್ಚೆಗಳು ಬಿಜೆಪಿ ಪಡಸಾಲೆಯಿಂದ ಕೇಳಿಬರುತ್ತಿವೆ. ಹೈಕಮಾಂಡ್ ಮಟ್ಟದಲ್ಲೂ ಈ ಬಗ್ಗೆ ಚರ್ಚೆ ಆಗಿದೆ. 2019ರ ಚುನಾವಣೆ ಸಂದರ್ಭದಲ್ಲೂ ಚಕ್ರವರ್ತಿ ಸೂಲಿಬೆಲೆ ಹೆಸರು ಇದೇ ರೀತಿ ಹರಿದಾಡಿತ್ತು.