ಧಾರವಾಡ: ಆನ್ಲೈನ್ ಗೇಮ್ನಲ್ಲಿ 3 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲ್ಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ.. 28 ವರ್ಷದ ಬಸವರಾಜ ಸಕ್ರಪ್ಪನ್ನವರ ಆತ್ಮಹತ್ಯೆ ಮಾಡಿಕೊಂಡ ಯುವಕ.
ಯುಕೆ ಟೆಕ್ಸ್ ಫೈನಾನ್ಸ್ ಕಂಪನಿಯಿಂದ ಸಂಗ್ರಹಿಸಿದ್ದ ಹಣವನ್ನು ಬಸವರಾಜ ಸಕ್ರಪ್ಪನ್ನವರ ಕೇವಲ ಕೆಲವೇ ತಿಂಗಳುಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದರು. ಫೈನಾನ್ಸ್ ಮಾಲೀಕರಿಗೆ ಹಣ ಕಟ್ಟಲು ಸಾಧ್ಯವಾಗದೇ ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ. ಸಾಲಕ್ಕೆ ಹೆದರಿ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕುಟುಂಬ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.
ಮನೆಯ ಹಿತಲು ಮರದಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಇಳಿಸಿ ಶವಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ಅಸ್ವಾಭಾವಿಕ ಮರಣವಾಗಿ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


