ಲಂಚಕ್ಕೆ ಬೇಡಿಕೆ ಇಟ್ಟರೇ ತಹಶೀಲ್ದಾರ್? ಜೇವರ್ಗಿಯಲ್ಲಿ ಆಡಿಯೋ ವಾರ್!

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಮತ್ತು ಸಿಬ್ಬಂದಿ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಲಂಚಕ್ಕಾಗಿ ತಹಶೀಲ್ದಾರ್ ಪೀಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಬಹಿರಂಗ ಸಭೆಯಲ್ಲೇ ಸಿಬ್ಬಂದಿ ಬಳಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬುದು ಮುಖ್ಯ ದೂರು. ಈ ಕುರಿತು ಸಿಬ್ಬಂದಿ ವರ್ಗವು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. “ನನ್ನ ಹೆಸರಿನಲ್ಲಿ ನೀವು ಹಣ ಮಾಡುತ್ತೀರಿ, ಹಾಗಾಗಿ ನನಗೂ ಪಾಲು ನೀಡಬೇಕು” ಎಂದು ತಹಶೀಲ್ದಾರ್ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
“ಸರ್ಕಾರಿ ಕಾರ್ಯಕ್ರಮಗಳು ಮತ್ತು ಜನಪ್ರತಿನಿಧಿಗಳ ಕೆಲಸಗಳಿಗೆ ನಾವೇ ಹಣ ಹೊಂದಿಸಬೇಕು. ಇನ್ನು ನಿಮಗೂ ಹಣ ನೀಡಲು ನಮ್ಮಿಂದ ಸಾಧ್ಯವಿಲ್ಲ. ಬೇಕಿದ್ದರೆ ನನ್ನನ್ನು ಆರ್‌ಐ (RI) ಜವಾಬ್ದಾರಿಯಿಂದ ಮುಕ್ತಗೊಳಿಸಿ ಕಚೇರಿ ಕೆಲಸಕ್ಕೆ ಹಾಕಿ” ಎಂದು ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿರುವ ಸಂಭಾಷಣೆ ವೈರಲ್ ಆಗಿದೆ. ಹಣ ನೀಡದಿದ್ದರೆ ನಿಮ್ಮ ವಿರುದ್ಧ ಇಲಾಖಾ ತನಿಖೆ ನಡೆಸಲಾಗುವುದು ಎಂದು ತಹಶೀಲ್ದಾರ್ ಹೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಹಶೀಲ್ದಾರ್ ಮಲ್ಲಣ್ಣ ನೀಡಿದ ಸ್ಪಷ್ಟನೆ ಏನು?
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ತಳ್ಳಿಹಾಕಿದ್ದಾರೆ. “ನಾನು ಯಾರ ಬಳಿಯೂ ಹಣ ಕೇಳಿಲ್ಲ. ಆರು ತಿಂಗಳ ಹಿಂದೆ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮವೊಂದು ಸರಿಯಾಗಿ ನಡೆಯದಿದ್ದಕ್ಕೆ ಸಭೆಯಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದೆ. ಅಮಾನತುಗೊಂಡಿರುವ ವಿಎ (VA) ಶರಣು ಎಂಬಾತನೇ ಈ ಪಿತೂರಿಯ ಹಿಂದಿದ್ದಾನೆ. ಈತ ಹಿಂದಿನ ತಹಶೀಲ್ದಾರ್‌ಗಳಿಗೂ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿದ್ದ. ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ. ಆತನ ಇಂತಹ ಬೆದರಿಕೆಗಳಿಗೆ ನಾನು ಮಣಿಯುವುದಿಲ್ಲ.” ಎಂದಿದ್ದಾರೆ.
ಸದ್ಯ ಈ ಆಡಿಯೋ ತುಣುಕು ಜಿಲ್ಲಾಧಿಕಾರಿಗಳ ಅಂಗಳ ತಲುಪಿದ್ದು, ಈ ಭ್ರಷ್ಟಾಚಾರದ ಆರೋಪದ ಸತ್ಯಾಸತ್ಯತೆ ಏನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.




