ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಅನ್ನೋದನ್ನೇ ಅದಾಗಲೇ ಮತದಾರರು ಮರೆತು ಹೋಗಿದ್ರು. ಕಾರಣ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಆಯೋಗದ ಮೊರೆ ಹೋಗಲಾಗಿತ್ತು. ಸುಮಾರು ಎರಡೂವರೆ ವರ್ಷಗಳ ಬಳಿಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸ್ಸಿಗೆ ಸರ್ಕಾರ ಅನುಮೋದನೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹಾದಿ ಒಂದು ಹಂತಕ್ಕೆ ಸುಗಮವಾಗಿದೆ.
ಹೌದು.. ಎರಡೂವರೆ ವರ್ಷಗಳೇ ಕಳೆದು ಹೋಗಿದೆ. ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಡೆಸೋದಿಕ್ಕೆ ನಾನಾ ಕಾರಣಗಳು ಅಡ್ಡಿ ಉಂಟು ಮಾಡಿದ್ವು. ಅವುಗಳಲ್ಲಿ ಪ್ರಮುಖವಾಗಿ ಕ್ಷೇತ್ರ ಮರು ವಿಂಗಡಣೆ ಮತ್ತು ಪ್ರವರ್ಗವಾರು ಮೀಸಲಾತಿ ಕೂಡ ತೊಡಕಾಗಿತ್ತು. ಇದೀಗ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರದ ಮರು ವಿಂಗಡಣೆ ಮತ್ತು ಪ್ರವರ್ಗವಾರು ಮೀಸಲು ಕುರಿತಂತೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ನೀಡಿದ ಶಿಫಾರಸ್ಸಿಗೆ ಸಮ್ಮತಿ ದೊರಕಿದೆ.
ಕೊಡಗು ಜಿಲ್ಲೆಯೊಂದನ್ನ ಹೊರತುಪಡಿಸಿ ಇತರೆ 30 ಜಿಲ್ಲಾ ಪಂಚಾಯ್ತಿಗಳಿಗೆ ಒಟ್ಟು 1101 ಸದಸ್ಯರ ಆಯ್ಕೆ ನಡೆಯಬೇಕಿದೆ. ಅದರಲ್ಲಿ 234 ತಾಲೂಕು ಪಂಚಾಯ್ತಿಗಳಿಗೆ 3621 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಪ್ರವರ್ಗವಾರು ಶೇ 33 ಹಾಗೂ ಶೇ 50ರಷ್ಟು ಮಹಿಳಾ ಮೀಸಲಾತಿ ನಿಗದಿ ಪಡಿಸಲಾಗಿದೆ. ಈ ಮೂಲಕ ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಬಹುತೇಕ ಹಾದಿ ಸುಗಮವಾಗಿದೆ. ಚುನಾವಣೆ ಘೋಷಣೆ ಯಾವಾಗ ಎಂಬ ಪ್ರಶ್ನೆಗೆ ಸಧ್ಯಕ್ಕೆ ಉತ್ತರವಿಲ್ಲ. ಲೋಕಸಭೆ ಚುನಾವಣೆ ಬಳಿಕ ಪಂಚಾಯ್ತಿ ಚುನಾವಣೆಗೆ ಮಹೂರ್ತ ನಿಗದಿ ಮಾಡಬಹುದು ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.