ದೇಶಾದ್ಯಂತ ಎರಡನೇ ಹಂತದ ಚುನಾವಣೆ ಭಾಗವಾಗಿ ದಕ್ಷಿಣ ಕರ್ನಾಟಕದ (South karnataka) 14 ಲೋಕಸಭೆ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ದ್ವಿಮುಖ ಪೈಪೋಟಿ ಏರ್ಪಟ್ಟಿದೆ.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಹೀನಾವಾಗಿ ಸೋಲುಂಡಿದ್ದ ಬಿಜೆಪಿ-ಜೆಡಿಎಸ್ (BJP-JDS)​ ಜಂಟಿಯಾಗಿ ಸ್ಪರ್ಧಿಸಿವೆ. ಆಡಳಿತ ಪಕ್ಷ ಕಾಂಗ್ರೆಸ್​ (Congress) ಏಕಾಂಗಿಯಾಗಿ ಸ್ಪರ್ಧಿಸಿದೆ.

ಭೌಗೋಳಿಕ, ಸಾಮಾಜಿಕ ಪರಿಸ್ಥಿತಿಗಳಿಗೆ ಹೋಲಿಸಿದರೇ ಉತ್ತರ ಕರ್ನಾಟಕಕ್ಕಿಂತ ಭಿನ್ನವಾಗಿದೆ ದಕ್ಷಿಣ ಕರ್ನಾಟಕ. ಅಲ್ಲಿ ಇಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರುವ ಅಂಶಗಳು ಭಿನ್ನವಾಗಿ ಇರುತ್ತವೆ.

ಈ ಕಾರಣಕ್ಕಾಗಿಯೇ ರಾಜಕೀಯ ಪಕ್ಷಗಳು ಪ್ರಾಂತ್ಯಕ್ಕನುಗುಣವಾಗಿ ರಣವ್ಯೂಹಗಳನ್ನು ರಚಿಸಿಕೊಂಡಿವೆ

ಏಪ್ರಿಲ್ 26.. ಯಾವೆಲ್ಲಾ ಕ್ಷೇತ್ರಗಳಲ್ಲಿ ಚುನಾವಣೆ? ಯಾರೆಲ್ಲಾ ಸ್ಪರ್ಧೆ?

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ(ಎಸ್​ಸಿ ಮೀಸಲು ಕ್ಷೇತ್ರ), ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ (ಎಸ್​ಸಿ ಮೀಸಲು ಕ್ಷೇತ್ರ), ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ,ಕೋಲಾರ(ಎಸ್​ಸಿ ಮೀಸಲು ಕ್ಷೇತ್ರ)

  • ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪೂಜಾರಿ (ಬಿಜೆಪಿ) – ಜಯಪ್ರಕಾಶ್ ಹೆಗಡೆ (ಕಾಂಗ್ರೆಸ್)
  • ಹಾಸನ – ಪ್ರಜ್ವಲ್ ರೇವಣ್ಣ(ಜೆಡಿಎಸ್​) – ಶ್ರೇಯಸ್ ಪಟೇಲ್​ (ಕಾಂಗ್ರೆಸ್​)
  • ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಾ(ಬಿಜೆಪಿ) – ಪದ್ಮರಾಜ್ ರಾಮಯ್ಯ (ಕಾಂಗ್ರೆಸ್​)
  • ಚಿತ್ರದುರ್ಗ(ಎಸ್​ಸಿ ಮೀಸಲು ಕ್ಷೇತ್ರ) – ಗೋವಿಂದ ಕಾರಜೋಳ (ಬಿಜೆಪಿ) – ಚಂದ್ರಪ್ಪ (ಕಾಂಗ್ರೆಸ್​)
  • ತುಮಕೂರು –  ವಿ ಸೋಮಣ್ಣ (ಬಿಜೆಪಿ) ಮುದ್ದಹನುಮೇಗೌಡ (ಕಾಂಗ್ರೆಸ್​)
  • ಮಂಡ್ಯ – ಹೆಚ್​ಡಿ ಕುಮಾರಸ್ವಾಮಿ (ಜೆಡಿಎಸ್​) – ಸ್ಟಾರ್ ಚಂದ್ರು (ಕಾಂಗ್ರೆಸ್​)
  •  ಮೈಸೂರು-ಕೊಡಗು – ಯದುವೀರ್ ಒಡೆಯರ್​ (ಬಿಜೆಪಿ) – ಲಕ್ಷ್ಮಣ್​ (ಕಾಂಗ್ರೆಸ್​)
  • ಚಾಮರಾಜನಗರ (ಎಸ್​ಸಿ ಮೀಸಲು ಕ್ಷೇತ್ರ) – ಸುನೀಲ್ ಬೋಸ್ (ಕಾಂಗ್ರೆಸ್​) – ಬಾಲರಾಜು (ಬಿಜೆಪಿ)
  •  ಬೆಂಗಳೂರು ಗ್ರಾಮೀಣ – ಡಿಕೆ ಸುರೇಶ್​ (ಕಾಂಗ್ರೆಸ್) – ಡಾ.ಸಿಎನ್ ಮಂಜುನಾಥ್ (ಬಿಜೆಪಿ)
  • ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ (ಬಿಜೆಪಿ) – ರಾಜೀವ್ ಗೌಡ (ಕಾಂಗ್ರೆಸ್)
  • ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಬಿಜೆಪಿ) – ಸೌಮ್ಯಾ ರೆಡ್ಡಿ (ಕಾಂಗ್ರೆಸ್​)
  •  ಬೆಂಗಳೂರು ಕೇಂದ್ರ – ಪಿಸಿ ಮೋಹನ್ (ಬಿಜೆಪಿ) – ಮನ್ಸೂರ್ ಆಲಿ ಖಾನ್(ಕಾಂಗ್ರೆಸ್​)
  •  ಚಿಕ್ಕಬಳ್ಳಾಪುರ – ಡಾ.ಸುಧಾಕರ್​(ಬಿಜೆಪಿ) – ರಕ್ಷಾ ರಾಮಯ್ಯ (ಕಾಂಗ್ರೆಸ್​)
  • ಕೋಲಾರ(ಎಸ್​ಸಿ ಮೀಸಲು ಕ್ಷೇತ್ರ) – ಕೆವಿ ಗೌತಮ್ (ಕಾಂಗ್ರೆಸ್) – ಮಲ್ಲೇಶ್​ ಬಾಬು(ಜೆಡಿಎಸ್​)

14 ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆ 2,85,42,534

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 11ರಲ್ಲಿ, ಕಾಂಗ್ರೆಸ್, ಜೆಡಿಎಸ್​ ಮತ್ತು ಪಕ್ಷೇತರ ಅಭ್ಯರ್ಥಿ ತಲಾ 1 ಕ್ಷೇತ್ರದಲ್ಲಿ ಜಯ ಗಳಿಸಿತ್ತು

ಹೊಸಬರ ಜೋರು

ಮೈತ್ರಿ ಕಾರಣ ಕೋಲಾರ, ಹಾಸನ, ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವ ಬಿಜೆಪಿ ಉಳಿದ 11 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಈ ಪೈಕಿ 8 ಹಾಲಿ ಸಂಸದರಿಗೆ ಕೊಕ್ ನೀಡಿದೆ.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆಶೀಪ್ಟ್ ಮಾಡಿದೆ. ಒಟ್ಟು 10 ಕಡೆ ಹೊಸಬರು ಸ್ಪರ್ಧೆ ಮಾಡಿದ್ದಾರೆ, ನಾಲ್ವರು ಸಿಟ್ಟಿಂಗ್ ಎಂಪಿಗಳು ಮಾತ್ರ ಕಣದಲ್ಲಿದ್ದಾರೆ.

 ಪ್ರಭಾವಿಸುವ ಅಂಶಗಳು

  • 2023ರ ಅಸೆಂಬ್ಲಿ ಚುನಾವಣೆಯಲ್ಲಿ ನೀಡಿದ ಐದು ಗ್ಯಾರಂಟಿಗಳೇ ಈ ಚುನಾವಣೆಯಲ್ಲಿಯೂ ಕಾಂಗ್ರೆಸ್​ಗೆ ಪ್ರಧಾನ ಬಲ.ರಾಜ್ಯ ವ್ಯಾಪಿ ಈ ಗ್ಯಾರಂಟಿಗಳನ್ನು ಜಾರಿ ಮಾಡಿರುವ ಕಾಂಗ್ರೆಸ್​ ಪಕ್ಷಕ್ಕೆ ಪ್ರಧಾನಿ ಮೋದಿ ಪ್ರಧಾವ, ಜನಪ್ರಿಯತೆ ಎಂದಿನಂತೆ ಗಟ್ಟಿ ಪೈಪೋಟಿ ನೀಡುತ್ತಿದೆ
  • ಈ ವರ್ಷ ರಾಜ್ಯದಲ್ಲಿ ಏರ್ಪಟ್ಟಿರುವ ಬರ ಪರಿಸ್ಥಿತಿ ಬಿಜೆಪಿಗೆ ಕಂಟಕವಾಗುವ ಸಾಧ್ಯತೆಗಳು ಇಲ್ಲದಿಲ್ಲ. ಬರಪರಿಹಾರ ಕೊಡಿ ಎಂದು ಹತ್ತಾರು ಬಾರಿ ಮನವಿ ಮಾಡಿಕೊಂಡರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಈ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ನಡೆಸಿದ ಕಾನೂನು ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಜಯ ಸಿಕ್ಕಿದೆ.ಕೇಂದ್ರಕ್ಕೆ ಮುಖಭಂಗ ಎದುರಾಗಿದೆ.
  • 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಅನುದಾನ, ಜಿಎಸ್​ಟಿ ಪರಿಹಾರ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ, ರಾಜ್ಯಕ್ಕೆ ನೀಡಬೇಕಾದ ಅನುದಾನದ ಬಗ್ಗೆ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಕೇಂದ್ರ ಸರ್ಕಾರ ವಾದ ಮಾಡುತ್ತಿದೆ. ಈ ವಿಚಾರವೀಗ ಪ್ರಚಾರ ಕಣದಲ್ಲಿ ಚೊಂಬು, ಚಿಪ್ಪು ರಾಜಕೀಯಕ್ಕೆ ನಾಂದಿ ಹಾಡಿದೆ.
  • ಬೆಂಗಳೂರಿಗೆ ಕುಡಿಯುವ ನೀರು ಇಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ನೀಡಿಲ್ಲ ಎಂದು ಕಾಂಗ್ರೆಸ್​ ಪ್ರತ್ಯಾರೋಪ ಮಾಡುತ್ತಿದೆ.
  • ಹಳೆ ಮೈಸೂರು ಪ್ರಾಂತ್ಯದ 14 ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ, ಒಕ್ಕಲಿಗ ಮತ ಬ್ಯಾಂಕ್​, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ಧರ್ಮದಂಗಲ್ ಚುನಾವಣಾ ವಿಷಯಗಳಾಗಿವೆ.

ಪ್ರಮುಖ ಕ್ಷೇತ್ರಗಳ ಪರಿಸ್ಥಿತಿ ಇದು..

ಕೋಲಾರ.. (Kolar) ಕಾಂಗ್ರೆಸ್​ ಪಕ್ಷದ ಗೌತಮ್​ – ಜೆಡಿಎಸ್​ ಪಕ್ಷದ ಮಲ್ಲೇಶ್​ಬಾಬು ನಡುವೆ ನೇರ ಪೈಪೋಟಿ ಇದೆ. ಕೋಲಾರ ಕಾಂಗ್ರೆಸ್ ಭದ್ರಕೋಟೆಯಾದರೂ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಗೆದ್ದಿತ್ತು.

ಇಲ್ಲಿಂದ ಆರು ಬಾರಿ ಗೆದ್ದು ಕೇಂದ್ರ ಮಂತ್ರಿಯಾಗಿದ್ದ ಕೆಹೆಚ್ ಮುನಿಯಪ್ಪ, ಪಕ್ಷದ ಒಳೇಟುಗಳ ಕಾರಣ ಸೋತಿದ್ದರು. ಈ ಬಾರಿ ಅಳಿಯನಿಗೆ ಟಿಕೆಟ್​ ಕೊಡಿಸಲು ಮುನಿಯಪ್ಪ ಮಾಡಿದ ಪ್ರಯತ್ನ ಕೊನೆ ಗಳಿಗೆಯಲ್ಲಿ ಫಲಿಸಲಿಲ್ಲ.

ಆಂತರಿಕ ವಿಬೇಧಗಳ ಕಾರಣ ಹೊರಗಿನ ವ್ಯಕ್ತಿಗೆ ಸಿಕ್ಕಿತು, ಬೆಂಗಳೂರಿನ ಕೆವಿ ಗೌತಮ್​ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ.. ಆದರೆ, ಗೌತಮ್​ಗೆ ಮುನಿಯಪ್ಪ ಬಣದ ಬೆಂಬಲ ಸರಿಯಾಗಿ ಸಿಕ್ತಿಲ್ಲ.

ಜೆಡಿಎಸ್​​ನಿಂದ ಅಷ್ಟೇ ಪರಿಚಿತವಲ್ಲದ ಮಲ್ಲೇಶ್​ಬಾಬು ಕಣಕ್ಕೆ ಇಳಿದಿದ್ದಾರೆ. ಮಲ್ಲೇಶ್ ಬಾಬು ಗೆಲುವು ಸಿಟ್ಟಿಂಗ್ ಎಂಪಿ ಮುನಿಸ್ವಾಮಿ ಸೇರಿ ಬಿಜೆಪಿ ನಾಯಕರ ಬೆಂಬಲವನ್ನು ಅಧರಿಸಿದೆ.

ಕುಡಿಯುವ ನೀರು, ಕೆಜಿಎಫ್​, ನಿರುದ್ಯೋಗ, ಮಾಲಿನ್ಯ, ಮೂಲಸೌಕರ್ಯಗಳು ಈ ಚುನಾವಣೆಯಲ್ಲಿ ಪ್ರಭಾವ ಬೀರಲಿವೆ.

ಇಲ್ಲಿ ಒಟ್ಟು ಮತದಾರರ ಸಂಖ್ಯೆ 16,31,850

ಬೆಂಗಳೂರು ಗ್ರಾಮೀಣ.. (Bengaluru Rural)ಹಾಲಿ ಸಂಸದ ಡಿಕೆ ಸುರೇಶ್​ ಅವರನ್ನೇ ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಅಳಿಯ ಡಾ.ಸಿಎನ್ ಮಂಜುನಾಥ್​ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಕ್ಷೇತ್ರ ದೇಶದ ಗಮನ ಸೆಳೆದಿದೆ.

ರಾಜಕೀಯ ಅನುಭವ ಇಲ್ಲದಿರುವುದು ಮಂಜುನಾಥ್​ ದೌರ್ಬಲ್ಯವಾಗಿದ್ದರೇ, ಮೋದಿ ಪ್ರಭಾವ ಕಾಂಗ್ರೆಸ್​ ಅಭ್ಯರ್ಥಿಗೆ ಭೀತಿ ಹುಟ್ಟಿಸಿದೆ.

ಇಲ್ಲಿ ಕಳೆದ 17 ಚುನಾವಣೆಗಳಲ್ಲಿ 13 ಬಾರಿ ಕಾಂಗ್ರೆಸ್​, ಮೂರು ಬಾರಿ ಜೆಡಿಎಸ್​, ಒಮ್ಮೆ ಬಿಜೆಪಿ ಗೆದ್ದಿದೆ.

ಇಲ್ಲಿನ ಮತದಾರರ ಸಂಖ್ಯೆ 27,63,910.

ಮೈಸೂರು-ಕೊಡಗು.. (Mysore-Kodagu) ಮೈಸೂರು ಮಹಾರಾಜರ ವಂಶಸ್ಥರು, ಜನಸಾಮಾನ್ಯನ ನಡುವೆ ಇಲ್ಲಿ ಪೈಪೋಟಿ ಏರ್ಪಟ್ಟಿದೆ.

ಮೈಸೂರು ರಾಜವಂಶಸ್ಥ ಯದುವೀರ್ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಕಟ್ಟಾಳು ಲಕ್ಷ್ಮಣ್​ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಂತ ಜಿಲ್ಲೆಯಾದ ಕಾರಣ ಕ್ಷೇತ್ರವನ್ನು ಗೆಲ್ಲಲು ಅವರು ವಿಸ್ತೃತ ಪ್ರಚಾರದಲ್ಲಿ ತೊಡಗಿದ್ದಾರೆ.

ಅಂದಾಜು 4.7 ಲಕ್ಷ ಒಕ್ಕಲಿಗ ಮತದಾರರು ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್, 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಕ್ಕಲಿಗರಿಗೆ ಟಿಕೆಟ್ ನೀಡಿದೆ.

ಇಲ್ಲಿನ ಮತದಾರರ ಸಂಖ್ಯೆ 20,92,222

ಹಾಸನ.. (Hassan) ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರ ರಾಜಕೀಯ ತವರು ಕ್ಷೇತ್ರವಿದು. ಇಲ್ಲಿಂದ ಸತತ ಐದು ಬಾರಿ ಗೆದ್ದಿದ್ದ ದೇವೇಗೌಡರು 2019ರಲ್ಲಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು.

2019ರಲ್ಲಿ ಜೆಡಿಎಸ್​ ಗೆದ್ದ ಏಕೈಕ ಕ್ಷೇತ್ರವಿದೆ. ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಜೆಡಿಎಸ್​ ಟಿಕೆಟ್ ನೀಡಿದೆ. ಹೊಳೆನರಸೀಪುರದಲ್ಲಿ ಹೆಚ್​ ಡಿ ರೇವಣ್ಣ ವಿರುದ್ಧ ಕೂದಲೆಳೆ  ಅಂತರದಲ್ಲಿ ಸೋತಿದ್ದ ಶ್ರೇಯಸ್ ಪಟೇಲ್​​ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಇಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬದ್ಧ ಶತ್ರುಗಳಂತೆ ವರ್ತಿಸುತ್ತಾರೆ. ಆದರೆ ಇಲ್ಲಿ,  ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ತಮಗೆ ಲಾಭ ತಂದುಕೊಡಲಿದೆ ಎನ್ನುವುದು ಕಾಂಗ್ರೆಸ್ ನಂಬಿಕೆಯಾಗಿದೆ.

ಇಲ್ಲಿನ ಮತದಾರರ ಸಂಖ್ಯೆ 17,24,908

By admin

Leave a Reply

Your email address will not be published. Required fields are marked *

Verified by MonsterInsights