ಕಲಬುರಗಿ: ರಾಧಾಕೃಷ್ಣ (ಕಾಂಗ್ರೆಸ್)V/s ಉಮೇಶ್ ಜಾಧವ್ (ಬಿಜೆಪಿ)
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡಮನಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಎದುರಾಳಿ ಪಕ್ಷ ಬಿಜೆಪಿಯಿಂದ ಜೈಂಟ್ ಕಿಲ್ಲರ್ ಉಮೇಶ್ ಜಾಧವ್ ಮತ್ತೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಸತತ ಏಳು ಬಾರಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು 2019ರಲ್ಲಿ ಉಮೇಶ್ ಜಾಧವ್ ಸೋಲಿಸಿದ್ದರು.
ಶಿವಮೊಗ್ಗ: ರಾಘವೇಂದ್ರ (ಬಿಜೆಪಿ) V/s ಗೀತಾ ಶಿವರಾಜ್ಕುಮಾರ್ (ಕಾಂಗ್ರೆಸ್)V/s ಈಶ್ವರಪ್ಪ (ಬಿಜೆಪಿ ಬಂಡಾಯ)
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಹಿರಿಯ ಪುತ್ರ ಹಾಲಿ ಸಂಸದ ಬಿವೈ ರಾಘವೇಂದ್ರ ಮತ್ತೊಮ್ಮೆ ಇಲ್ಲಿ ಬಿಜೆಪಿ ಅಭ್ಯರ್ಥಿ. ಇಲ್ಲಿ ರಾಘವೇಂದ್ರ ಗೆಲ್ಲಿಸಿಕೊಳ್ಳುವುದು ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಪ್ರತಿಷ್ಠೆಯ ಪ್ರಶ್ನೆ.
ಮಾಜಿ ಮುಖ್ಯಮಂತ್ರಿ, ದಿವಂಗತ ಸಾರೆಕೊಪ್ಪ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ಕುಮಾರ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಗೀತಾ ಸಹೋದರ ಮಧು ಬಂಗಾರಪ್ಪ ಸಚಿವರಾಗಿರುವ ಕಾರಣ,ಅವರಿಗೂ ಇದು ಪ್ರತಿಷ್ಠೆಯ ಪ್ರಶ್ನೆ.
ಪುತ್ರನಿಗೆ ಹಾವೇರಿ ಟಿಕೆಟ್ ಸಿಗದಿರಲು ಯಡಿಯೂರಪ್ಪ ಕುಟುಂಬವೇ ಕಾರಣ ಎಂದು ಬಲವಾಗಿ ನಂಬಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ. ತಾನು ಗೆಲ್ಲದಿದ್ದರೂ ಪರವಾಗಿಲ್ಲ ಬಿವೈ ರಾಘವೇಂದ್ರ ಸೋಲಬೇಕು. ಬಿಎಸ್ ಯಡಿಯೂರಪ್ಪ ಪ್ರತಿಷ್ಠೆ ಮುಕ್ಕಾಗಿಸಬೇಕು ಎಂದು ಈಶ್ವರಪ್ಪ ಪಣ ತೊಟ್ಟಿದ್ದಾರೆ.
ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್(ಬಿಜೆಪಿ) V/s ಪ್ರಭಾ ಮಲ್ಲಿಕಾರ್ಜುನ್(ಕಾಂಗ್ರೆಸ್) V/s ವಿನಯ್ ಕುಮಾರ್ (ಕಾಂಗ್ರೆಸ್ ಬಂಡಾಯ)
ರಾಜ್ಯ ಅಸೆಂಬ್ಲಿಯಲ್ಲಿ ಅತ್ಯಂತ ವಯೋವೃದ್ಧ ಶಾಸಕ 92 ವರ್ಷದ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಎದುರಾಳಿಯೂ ಶಾಮನೂರು ಸಂಬಂಧಿಯೇ ಆಗಿದ್ದಾರೆ. ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ವಿನಯ್ ಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದು, ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
ಬೆಳಗಾವಿ: ಜಗದೀಶ್ ಶೆಟ್ಟರ್(ಬಿಜೆಪಿ) V/s ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್)
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಮೃಣಾಲ್ಗೆ ಇದು ಮೊದಲ ಚುನಾವಣೆ. ತಾಯಿಯನ್ನೇ ನೆಚ್ಚಿ ಮೃಣಾಲ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇವರ ಎದುರಾಳಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ಚುನಾವಣೆಗೆ ಕೆಲವೇ ದಿನ ಮೊದಲು ರಾತ್ರೋರಾತ್ರಿ ಕ್ಯಾಂಪ್ ಬದಲಿಸಿದ್ದ ಜಗದೀಶ್ ಶೆಟ್ಟರ್ಗೆ ಇಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಇಲ್ಲಿ ಗೆಲ್ಲುವುದು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) V/s ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್)
ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಇಲ್ಲಿ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಇದು ಪ್ರಿಯಾಂಕಾ ಅವರಿಗೆ ಮೊದಲ ಚುನಾವಣೆ. ತಂದೆಯ ರಾಜಕೀಯ ಪ್ರಭಾವದ ಜೊತೆ ಚಿಕ್ಕಪ್ಪ-ದೊಡ್ಡಪ್ಪಂದಿರ ಕೃಪಾಶೀರ್ವಾದವನ್ನು ಪ್ರಿಯಾಂಕಾ ನೆಚ್ಚಿಕೊಂಡಿದ್ದಾರೆ. ಬಿಜೆಪಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಇಲ್ಲಿ ಪ್ರಿಯಾಂಕಾ ಎದುರಾಳಿಯಾಗಿದ್ದಾರೆ. ಇದು ಕೂಡ ಪ್ರತಿಷ್ಠೆಯ ಕಣವೇ ಆಗಿದೆ.
ಬೀದರ್: ಭಗವಂತ್ ಖೂಬಾ(ಬಿಜೆಪಿ) V/s ಸಾಗರ್ ಖಂಡ್ರೆ (ಕಾಂಗ್ರೆಸ್)
ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಪುತ್ರ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಇವರಿಗೂ ಇದು ಚುನಾವಣೆಯ ಮೊದಲ ಅನುಭವ. ತಾತ-ತಂದೆಯ ರಾಜಕೀಯ ಅನುಭವವೇ ಸಾಗರ್ ಖಂಡ್ರೆ ಬಲವಾಗಿದೆ. ಬಿಜೆಪಿ ಹಾಲಿ ಸಂಸದ, ಕೇಂದ್ರ ಸಚಿವರೂ ಆಗಿರುವ ಭಗವಂತ್ ಖೂಬಾರನ್ನೇ ಮತ್ತೆ ಕಣಕ್ಕೆ ಇಳಿಸಿದೆ.
ಬಾಗಲಕೋಟೆ: ಪಿಸಿ ಗದ್ದೀಗೌಡರ್(ಬಿಜೆಪಿ) V/s ಸಂಯುಕ್ತಾ ಪಾಟೀಲ್ (ಕಾಂಗ್ರೆಸ್)
ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶಿವಾನಂದ ಪಾಟೀಲ್ ವಿಜಯಪುರ ಜಿಲ್ಲೆಯವರಾದರೂ, ರಾಜಕೀಯ ಪ್ರಭಾವ, ಸಮುದಾಯದ ಬಲ ನಂಬಿಕೊಂಡು ಪುತ್ರಿಯ ರಾಜಕೀಯ ಭವಿಷ್ಯವನ್ನು ಪಣಕ್ಕೆ ಒಡ್ಡಿದ್ದಾರೆ. ಇಲ್ಲಿ ಹಾಲಿ ಸಂಸದ ಪಿಸಿ ಗದ್ದೀಗೌಡರ್ ಅವರನ್ನೇ ಬಿಜೆಪಿ ಕಣಕ್ಕೆ ಇಳಿಸಿದೆ.
ಧಾರವಾಡ: ಪ್ರಲ್ಹಾದ್ ಜೋಶಿ (ಬಿಜೆಪಿ) V/s ವಿನೋದ್ ಅಸೂಟಿ (ಕಾಂಗ್ರೆಸ್)
ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಲ್ಹಾದ್ ಜೋಶಿ ಇಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇವರ ಎದುರಾಳಿ ಕಾಂಗ್ರೆಸ್ ಪಕ್ಷ ವಿನೋದ್ ಅಸೂಟಿ ಅಭ್ಯರ್ಥಿಯಾಗಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಬಲವೂ ಕಾಂಗ್ರೆಸ್ ಪಕ್ಷಕ್ಕೆ ಇದೆ.
ಹಾವೇರಿ: ಬಸವರಾಜ ಬೊಮ್ಮಾಯಿ (ಬಿಜೆಪಿ) V/s ಆನಂದ್ ಗಡ್ಡದೇವರಮಠ (ಕಾಂಗ್ರೆಸ್)
ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧಿಸಲು ಒಲ್ಲೆ ಎಂದ ಕಾರಣ ಕ್ಷೇತ್ರ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಇಲ್ಲಿ ಬಿಜೆಪಿ ಕಣಕ್ಕೆ ಇಳಿಸಿದೆ. ಇವರ ಎದುರಾಳಿಯಾಗಿ ಹೊಸಬರಾದ ಆನಂದ ಗಡ್ಡದೇವರಮಠ ಅವರನ್ನು ಕಾಂಗ್ರೆಸ್ ಫೀಲ್ಡಿಗೆ ಇಳಿಸಿದೆ.
ಬಳ್ಳಾರಿ: ಶ್ರೀರಾಮುಲು (ಕಾಂಗ್ರೆಸ್) V/s ಇ.ತುಕಾರಾಂ (ಕಾಂಗ್ರೆಸ್)
ಹಾಲಿ ಸಂಸದ ದೇವೇಂದ್ರಪ್ಪಗೆ ಟಿಕೆಟ್ ನಿರಾಕರಿಸಿದ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮಾಜಿ ಮಂತ್ರಿ ಶ್ರೀರಾಮುಲು ಅವರಿಗೆ ಮಣೆ ಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಸಂಡೂರಿನ ಹಾಲಿ ಶಾಸಕ ಎರೆಗಾರ್ ತುಕಾರಾಮ್ ಅವರನ್ನು ಲೋಕಸಭೆ ಅಖಾಡಕ್ಕೆ ಇಳಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದೆ.
ಕೊಪ್ಪಳ: ಬಸವರಾಜ್ ಕ್ಯಾವಟೋರ್ (ಬಿಜೆಪಿ) V/s ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್)
ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ಅವರನ್ನೇ ಮತ್ತೆ ಕಣಕ್ಕೆ ಇಳಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಇವರು ಸೋತಿದ್ದರು. ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡದೇ ಮಾಜಿ ಶಾಸಕ ಶರಣಪ್ಪ ಪುತ್ರ ಬಸವರಾಜ್ ಕ್ಯಾವಟೋರ್ಗೆ ಟಿಕೆಟ್ ನೀಡಿದೆ. ಇದರಿಂದ ಸಿಡಿದೆದ್ದ ಸಂಗಣ್ಣ ಕಾಂಗ್ರೆಸ್ ಸೇರಿ ರಾಜಶೇಖರ್ ಹಿಟ್ನಾಳ್ರನ್ನು ಬೆಂಬಲಿಸಿದ್ದಾರೆ. ಆದರೆ, ಗಂಗಾವತಿ ಕಾಂಗ್ರೆಸ್ ಭಿನ್ನಮತ ರಾಜೇಶೇಖರ್ಗೆ ದುಬಾರಿ ಆಗುವ ಭೀತಿ ಎದುರಾಗಿದೆ. ಬಿಜೆಪಿ ಅಭ್ಯರ್ಥಿಗೆ ಇತ್ತೀಚಿಗೆ ಮತ್ತೆ ಕಮಲ ಹಿಡಿದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಬೆಂಬಲವಿದೆ.
ವಿಜಯಪುರ: ರಮೇಶ್ ಜಿಗಜಿಣಗಿ(ಬಿಜೆಪಿ) V/s ರಾಜು ಆಲಗೂರ (ಕಾಂಗ್ರೆಸ್)
ಬಿಜೆಪಿಯ ಹಾಲಿ ಸಂಸದ ರಮೇಶ್ ಜಿಗಜಿಣಗಿ ಇಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ, ಪ್ರೊ.ರಾಜು ಅಲಗೂರ ಅವರನ್ನು ಕಣಕ್ಕೆ ಇಳಿಸಿದೆ. ಜಿಗಜಿಣಗಿಗೆ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲವಿದ್ದರೇ, ರಾಜು ಅಲಗೂರ ಅವರಿಗೆ ಸಚಿವ ಎಂಬಿ ಪಾಟೀಲರ ಬಲ ಇದೆ.
ರಾಯಚೂರು: ರಾಜಾ ಅಮರೇಶ್ವರ ನಾಯಕ್ (ಬಿಜೆಪಿ) V/s ಕುಮಾರನಾಯಕ್ (ಕಾಂಗ್ರೆಸ್)
ಪಕ್ಷದೊಳಗೆ ತೀವ್ರ ವಿರೋಧ, ಅಸಮಾಧಾನದ ನಡುವೆಯೂ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರ ಮೇಲೆ ಬಿಜೆಪಿ ಮತ್ತೆ ವಿಶ್ವಾಸವಿರಿಸಿದೆ. ಇಲ್ಲಿ ರಾಜಾ ಅಮರೇಶ್ವರ ನಾಯಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿವೃತ್ತ ಐಎಎಸ್ ಅಧಿಕಾರಿ ಕುಮಾರನಾಯಕ್ರನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಬಿಸಿಲು ರಾಜಕೀಯ ನಡೆದಿದೆ.
ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) V/s ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್)
ಇಲ್ಲಿ ಬಿಜೆಪಿಯ ಹಿಂದೂತ್ವ ಫೈರ್ ಬ್ರಾಂಡ್, ವಿವಾದಾತ್ಮಕ ಹೇಳಿಕೆಗಳ ವೀರ ಅನಂತಕುಮಾರ್ ಹೆಗಡೆಗೆ ಬಿಜೆಪಿ ಕೊಕ್ ನೀಡಿದೆ. ಶಿರಸಿ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿದ್ದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಮಣೆ ಹಾಕಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಇವರು ಕೂಡ ಖಾನಾಪುರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಇಲ್ಲಿ ಕಾಗೇರಿ ಅವರಿಗೆ ಅನಂತ ಕುಮಾರ್ ಹೆಗಡೆ ಬೆಂಬಲ ಸಿಕ್ಕಿಲ್ಲ. ಇದೇ ವೇಳೆ, ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದ ಪರ ನಿಂತಿಲ್ಲ. ಇದು ಬಿಜೆಪಿಗೆ ತಲೆ ಬಿಸಿ ತಂದಿದೆ.
ಓದುಗರ ಗಮನಕ್ಕೆ: ನಾಳೆ ಬೆಳಗ್ಗೆ ಆರು ಗಂಟೆಯಿಂದಲೇ ನಿಮ್ಮ ಫ್ರೀಡಂ ಟಿವಿಯಲ್ಲಿ ಚುನಾವಣೆಯ ಕ್ಷಣ ಕ್ಷಣದ ಅಪ್ಡೇಟ್ಗಳನ್ನು ನಿಮ್ಮ ಮುಂದೆ ಇಡುತ್ತೇವೆ.. ತಪ್ಪದೇ ವೀಕ್ಷಿಸಿ