ಮರು ಬಳಕೆ ಉಡ್ಡಯನ ವಾಹನ (ಆರ್‌ಎಲ್‌ವಿ) “ಪುಷ್ಪಕ್’ ರಾಕೆಟ್‌ನ 3ನೇ ಪರೀಕ್ಷೆ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿ ರನ್‌ವೇಯಲ್ಲಿ ನಡೆಯಿತು.
ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ರೋಬೋಟಿಕ್ ಲ್ಯಾಂಡಿಂಗ್ ಸಾಮರ್ಥ್ಯವನ್ನು ಶುಕ್ರವಾರದ ಪರೀಕ್ಷೆ ವೇಳೆ ಪರಿಶೀಲನೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. ಪುಷ್ಪಕ ರಾಕೆಟ್ ಮರು ಬಳಕೆ ಮಾಡಬಹುದಾದ ರಾಕೆಟ್ ವಿಭಾಗದಲ್ಲಿ ಭಾರತದ ಮಹ ತ್ವದ ಪ್ರಯತ್ನ ಇದು
ಏನಿದು ಪುಷ್ಪಕ್ ರಾಕೆಟ್?
ಪುಷ್ಪಕ್ ಎಂದು ಹೆಸರಿಸಲಾಗಿರುವ ರಾಕೆಟ್ ಮರು ಬಳಕೆ ಮಾಡಬಹುದಾದ ಉಡ್ಡಯನ ವಾಹನವಾಗಿದೆ (ಆರ್‌ಎಲ್‌ವಿ). ವಿಮಾನದ ಮಾದರಿಯ ಅಂತರಿಕ್ಷ ನೌಕೆ ಇದಾಗಿದ್ದು, ಈ ರಾಕೆಟ್‌ನಿಂದ ಕಡಿಮೆ ವೆಚ್ಚದಲ್ಲಿ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು. ವಾಯುಪಡೆ ಹೆಲಿಕಾಪ್ಟರ್ ಸಹಾಯದಿಂದ ಇದನ್ನು ಉಡಾವಣೆ ಮಾಡಲಾಗುತ್ತದೆ. ಈಗಾಗಲೇ ಅಮೆರಿಕ, ಚೀನ ಇಂತಹ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ಉಡ್ಡಯನ ವಾಹನಗಳನ್ನು ಬಳಸುತ್ತಿದ್ದು, ಭಾರತ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ.
ಲಾಭವೇನು?
ರಾಕೆಟ್‌ನ ಮೇಲ್ಭಾಗದಲ್ಲಿರುವ ಅತ್ಯಂತ ದುಬಾರಿ ಭಾಗಗಳನ್ನು ಮರು ಬಳಕೆ ಮಾಡುವ ರೀತಿಯಲ್ಲಿ ತಯಾರಿಸಲಾಗಿದೆ. ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಮರುಪೂರಣ ಸಾಮರ್ಥ್ಯ ವನ್ನೂ ಅದು ಹೊಂದಿದೆ. ನವೀಕರಣಕ್ಕಾಗಿ ಉಪಗ್ರಹ ಗಳನ್ನು ವಾಪಸ್ ಪಡೆಯಲು ಇದು ನೆರವು ನೀಡುತ್ತದೆ. ಭಾರತವು ಬಾಹ್ಯಾಕಾಶದಲ್ಲಿ ಕನಿಷ್ಠ ತ್ಯಾಜ್ಯ ಉಳಿಸಲು ಬಯಸುತ್ತಿದ್ದು, ಪುಷ್ಪಕ ರಾಕೆಟ್ ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಪುಷ್ಪಕ್ ಹೀಗಿದೆ…
6.5 ಮೀ.ಉದ್ದ , 1.75 ಟನ್ ತೂಕ, 100 ಕೋಟಿ ರೂ.ಯೋಜನೆ ವೆಚ್ಚ
ಪುಷ್ಪಕ್ ಮರು ಬಳಕೆ ಮಾಡಬಹುದಾದ ಭವಿಷ್ಯದ ರಾಕೆಟ್ ಉಡ್ಡಯನ ವಾಹನವಾಗಿದೆ.
-ಎಸ್. ಸೋಮನಾಥ್, ಇಸ್ರೋ ಅಧ್ಯಕ್ಷ