ಬೆಂಗಳೂರು: ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಸಲು ಸರ್ಕಾರ ನಿರ್ಧರಿಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಸಮೀಕ್ಷೆಯನ್ನು ಕೈಗೊಳ್ಳಲಿದ್ದು, ಸುಮಾರು 7 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ಉದ್ದೇಶವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದೆ 2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿದ್ದರು. ಆ ವರದಿಗೆ 10 ವರ್ಷ ಕಳೆದಿರುವುದರಿಂದ, ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಾರ್ಯವನ್ನು ವಹಿಸಲಾಗಿದೆ. ರಾಜ್ಯದ ವಿವಿಧ ಜಾತಿಗಳು ವೈರುಧ್ಯತೆ ಮತ್ತು ಅಸಮಾನತೆಯಿಂದ ಕೂಡಿರುವ ಹಿನ್ನೆಲೆಯಲ್ಲಿ, ಸಂವಿಧಾನ ಒದಗಿಸಿರುವ ಸಮಾನ ಅವಕಾಶಗಳನ್ನು ಎಲ್ಲರಿಗೂ ನೀಡಲು ಈ ಸಮೀಕ್ಷೆ ನೆರವಾಗಲಿದೆ.
ಮುಖ್ಯಮಂತ್ರಿ ಡಾ. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ, “ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಅಸಮಾನತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವು ಅಸಮಾನತೆಯನ್ನು ತೊಲಗಿಸಲೇಬೇಕು” ಎಂದು ಹೇಳಿದರು.
ಸಮೀಕ್ಷೆ ಮೂಲಕ ಸಮಾಜದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗತಿ ಸರಿಯಾಗಿ ತಿಳಿದರೆ ಮಾತ್ರ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ರಾಜ್ಯದ ಸುಮಾರು 2 ಕೋಟಿ ಕುಟುಂಬಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ.
ಸಮೀಕ್ಷೆ ಕಾರ್ಯಕ್ಕಾಗಿ ಸುಮಾರು 1.75 ಲಕ್ಷ ಶಿಕ್ಷಕರನ್ನು ಬಳಸಿ, ದಸರಾ ರಜೆ ಅವಧಿಯಲ್ಲೇ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಪ್ರತಿಯೊಬ್ಬ ಶಿಕ್ಷಕರಿಗೆ ಸುಮಾರು 120 ರಿಂದ 150 ಮನೆಗಳನ್ನು ವಹಿಸಲಾಗಿದ್ದು, ಅವರಿಗೆ ರೂ.20 ಸಾವಿರದವರೆಗೆ ಗೌರವ ಸಂಭಾವನೆ ನೀಡಲಾಗುತ್ತದೆ. ಈ ಯೋಜನೆಗೆ ತಾತ್ಕಾಲಿಕವಾಗಿ ರೂ.420 ಕೋಟಿಯ ಅನುದಾನವನ್ನು ನಿಗದಿಪಡಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ನಿಧಿಯನ್ನು ಒದಗಿಸಲಾಗುವುದು.
ಸಮೀಕ್ಷೆಯಲ್ಲಿ ನಾಗಮೋಹನ ದಾಸ್ ಅವರ ಒಳಮೀಸಲಾತಿ ಸಮೀಕ್ಷೆಯಲ್ಲಿ ಬಳಕೆಯಾಗಿದ್ದ ವಿಶೇಷ ತಂತ್ರಜ್ಞಾನವನ್ನು ಅನುಸರಿಸಿ, ಪ್ರತಿ ಮನೆಯ ವಿದ್ಯುತ್ ಮೀಟರ್ ಆಧಾರದ ಮೇಲೆ ಜಿಯೋ ಟ್ಯಾಗ್ ಮಾಡಿ UHID ಸಂಖ್ಯೆಯನ್ನು ನೀಡಲಾಗುತ್ತದೆ. ಇದುವರೆಗೆ 1.55 ಲಕ್ಷ ಮನೆಗಳಿಗೆ ಈ ಸಂಖ್ಯೆಯನ್ನು ಅಳವಡಿಸಲಾಗಿದ್ದು, ವಿದ್ಯುತ್ ಸಂಪರ್ಕವಿಲ್ಲದ ಮನೆಗಳ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುತ್ತದೆ.
ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಕಾರ್ಯವನ್ನು ಸಹ ನಡೆಸಲಾಗುವುದು. ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕಾಗಿದ್ದು, ಯಾರೂ ಹೊರಗುಳಿಯಬಾರದು. ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಸರಿಯಾದ ಮಾಹಿತಿಯನ್ನು ನೀಡುವುದು ಸಮೀಕ್ಷೆಯ ವೈಜ್ಞಾನಿಕತೆಯನ್ನು ಹೆಚ್ಚಿಸುತ್ತದೆ.
ಸಮೀಕ್ಷೆ ಕುರಿತು ದೂರು ಅಥವಾ ಮಾಹಿತಿ ಬೇಕಾದರೆ ಸಾರ್ವಜನಿಕರು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಬಹುದು. ಆನ್ಲೈನ್ ಮೂಲಕವೂ ಭಾಗವಹಿಸಲು ಅವಕಾಶ ನೀಡಲಾಗಿದೆ. ಸಮೀಕ್ಷೆ ಆರಂಭವಾಗುವ ಮುನ್ನವೇ ಆಶಾ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ನಮೂನೆಗಳನ್ನು ಒದಗಿಸಿ, ಜಾಗೃತಿ ಮೂಡಿಸಲಿದ್ದಾರೆ.
ಈ ಸಮಗ್ರ ಸಮೀಕ್ಷೆ ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶ ಒದಗಿಸಲು ಮತ್ತು ಕಲ್ಯಾಣ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರದ ಮಹತ್ವದ ಹೆಜ್ಜೆಯಾಗಲಿದೆ.